ಉಡುಪಿ, ಅ. 03 (DaijiworldNews/MB) : ದಶಕಗಳಿಂದ ವರ್ಷಗಳಿಂದ ಮೂಲೆ ಗುಂಪಾಗಿದ್ದ ಭುಜಂಗ ಪಾರ್ಕ್ನಲ್ಲಿರುವ ರೇಡಿಯೋಗೆ ಜಿಲ್ಲಾಡಳಿತ ಇದೀಗ ಮರುಜೀವ ತುಂಬಿದೆ. ಸ್ಥಗಿತಗೊಂಡಿದ್ದ ರೇಡಿಯೋವನ್ನು ರಿಪೇರಿ ಮಾಡಿಸಿ ಅಕ್ಟೊಬರ್ 2 ರಂದು ಲೋಕಾರ್ಪಣೆ ಮಾಡಲಾಯಿತು.





ಸುಮಾರು 1938 ಇಸವಿಯಲ್ಲಿ ನಿರ್ಮಾಣಗೊಂಡ ಈ ಟವರ್ನ್ನು ಆಗಿನ ಮದ್ರಾಸ್ ಪ್ರೆಸಿಡೆನ್ಸಿಯಾ ಲಾ ಮಿನಿಸ್ಟರ್ ಉದ್ಘಾಟನೆ ಮಾಡಿದ್ದರು. ಕಾಲ ಕ್ರಮೇಣ ಕಾರ್ಯ ಸ್ಥಗಿತಗೊಂಡು ಬಾಗಿಲು ಮುಚ್ಚಿತು. ಹಲವಾರು ಉಡುಪಿಯ ನಾಗರಿಕರು ಇದರ ರಿಪೇರಿ ಮಾಡುವಂತೆ ನಗರ ಸಭೆ ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ದರು.
ಕಳೆದ ವರ್ಷ ಜಿಲ್ಲಾಧಿಕಾರಿ ಜಗದೀಶ್ ಅವರು ಈ ಟವರನ್ನು ಗಮನಿಸಿದ್ದು ಕೂಡಲೇ ದುರಸ್ಥಿ ಮಾಡುವಂತೆ ನಗರಸಭೆ ಸೂಚನೆ ಕೊಟ್ಟಿದರು. ಒಟ್ಟು ರೂ 85,000 ವೆಚ್ಚ ಮಾಡಿ ರೇಡಿಯೋ ಟವರನ್ನು ದುರಸ್ಥಿ ಮಾಡಲಾಗಿದೆ.
ಪ್ರತಿದಿನ ಸಂಜೆ 5. 30 ಗಂಟೆಯಿಂದ 8 ಗಂಟೆಯವರೆಗೆ ಶುಶ್ರಾವ್ಯ ಸಂಗೀತ ಕೇಳಿ ಬರುತ್ತದೆ. ಭುಜಂಗ ಪಾರ್ಕಿಗೆ ಬರುವವರಿಗೆ ಇದೊಂದು ಸುಂದರ ಅನುಭವ ನೀಡಲಿದೆ. ನಾಲ್ಕು ಮೈಕು ಸೇರಿದಂತೆ 1 ಆಂಪ್ಲಿಫೈಯರ್ ಅಳವಡಿಸಲಾಗಿದೆ.
ಇದರ ಮೂಲ ಸ್ವರೂಪದಲ್ಲಿ ಹೆಚ್ಚೇನೂ ಬದಲಾವಣೆ ಮಾಡದೆ ಹೊಸತನ ಕೊಡಲಾಗಿದೆ. ಪಾರ್ಕ್ ಗೆ ಬರುವ ಸಾರ್ವಜನಿಕರಿಗೆ ಸುಗಮವಾಗಿ ಕೇಳುವಂತೆ ಎಫ್ ಎಮ್ ಫ್ರಿಕ್ವೆನ್ಸಿ ಹೊಂದಾಣಿಕೆ ಮಾಡುವ ಸೌಲಭ್ಯ ಇದೆ. ಬೆಳಗ್ಗೆ 8 ಗಂಟೆ, ಮಧ್ಯಾಹ್ನ 12. 30 ಗಂಟೆಗೆ ಮತ್ತು ರಾತ್ರಿ 8. ಗಂಟೆಗೆ ಅಲಾರಾಂ (ಸೈರನ್) ಕೂಡ ಕೇಳುತ್ತದೆ. ಅಲ್ಲದೆ ಇಲ್ಲಿ ನಿಭಾಯಿಸಲು ಓರ್ವ ಸಿಬ್ಬಂದಿಯನ್ನು ಕೂಡ ನೇಮಿಸಲಾಗಿದೆ.
ಈ ರೇಡಿಯೋ ಟವರ್ನಲ್ಲಿ ಅಳವಡಿಸಿದ ಲೌಡ್ ಸ್ಪೀಕರ್ನಿಂದ ರೇಡಿಯೋ ಕಾರ್ಯಕ್ರಮ ಕೇಳಿ ಜನ ಆನಂದಿಸುತ್ತಿದ್ದರು. ಅಂದಿನ ಕಾಲದಲ್ಲಿ ರೇಡಿಯೋ ಕೊಳ್ಳಲು ಕಾಸಿಲ್ಲದ ಮಂದಿ ಈ ಟವರ್ ಬಳಿಗೆ ಬಂದು ರೇಡಿಯೋ ಆಲಿಸುತ್ತಿದ್ದರು. ರೇಡಿಯೋ ಪ್ರಸಾರ ಅಲ್ಲದೆ ಬೆಳಗ್ಗೆ 7ಕ್ಕೆ, ಮಧ್ಯಾಹ್ನ 12 ಗಂಟೆಗೆ ಟವರ್ನಿಂದ ಅಲರಾಂ ಕೇಳಿಸಲಾಗುತ್ತಿತ್ತು. ಅಜ್ಜರಕಾಡು, ಅಂಬಲಪಾಡಿ ಪರಿಸರದವರೆಗೆ ಈ ಟವರ್ನ ನಿನಾದ ಕೇಳಿಸುತ್ತಿತ್ತು, ಎಂದು ಸ್ಥಳೀಯರು ಹೇಳುತ್ತಾರೆ.
ಹಿಂದೆಲ್ಲ ಮಾಹಿತಿ ಮನೋರಂಜನೆ ರೇಡಿಯೋವನ್ನೇ ಅವಲಂಭಿತರಾಗಿರುತ್ತಿದ್ದರು. ಅಲ್ಲದೆ ಸಾರ್ವಜನಿಕ ಪ್ರಕಟಣೆ, ರೋಗದ ಬಗ್ಗೆ ಜಾಗ್ರತೆ ಮೂಡಿಸಲು ಈ ಮೂಲಕ ಘೋಷಣೆ ಮಾಡಲಾಗುತ್ತಿತ್ತು, ತುಳು ಕಾರ್ಯ ಕ್ರಮ ಪ್ರಸಾರವಾಗುತ್ತಿತ್ತು. ಹಿಂದೆ ರೇಡಿಯೋವನ್ನು ಮನೆಯಲ್ಲಿ ಇಟ್ಟುಕೊಳ್ಳಲು ಲೈಸನ್ಸ್ ಮಾಡಬೇಕಾದ ಕಾಲವೊಂದಿತ್ತು. ಈ ಟವರ್ ಅಕ್ಟೊಗನ್ (ಅಷ್ಟಭುಜಾಕೃತಿ) ಆಕೃತಿಯಲ್ಲಿದ್ದು ವಿಶೇಷವಾಗಿದೆ. "ರೇಡಿಯೋ ಪಾರ್ಕ್" ಪರಿಕಲ್ಪನೆಯಲ್ಲಿ ಇದನ್ನು ವಿನ್ಯಾಸ ಮಾಡಲಾಗಿದೆ. ದುರಸ್ಥಿ ಮಾಡಿರುವುದು ಸಂತೋಷ ವಾಗಿದೆ, ಆದರೆ ಪಾರ್ಕ್ ಗೆ ಬರುವವರು ಅದನ್ನು ಹೇಗೆ ಬಳಸುತ್ತಾರೆ ಎನ್ನುವುದು ಕೂಡ ಮುಖ್ಯ ಎನ್ನುತ್ತಾರೆ ಉಡುಪಿಯ ಉಪನ್ಯಾಸಕರಾದ ವಿನೀತ್ ರಾವ್.