ಕಾಸರಗೋಡು, ಅ. 03 (DaijiworldNews/MB) : ಜಿಲ್ಲೆಯಲ್ಲಿ ಕೊರೋನ ಸೋಂಕು ದಿನಂಪ್ರತಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂದಿನಿಂದ ಅಕ್ಟೋಬರ್ 9 ರ ತನಕ 1973 ರ ಕ್ರಿಮಿನಲ್ ಕಾಯ್ದೆಯಂತೆ 144 ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಆದೇಶ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ
ನಿಷೇಧಾಜ್ಞೆ ಅಕ್ಟೋಬರ್ 2 ರ ರಾತ್ರಿ 12 ಗಂಟೆಯಿಂದ ಅಕ್ಟೋಬರ್ 9 ರ ರಾತ್ರಿ 12 ಗಂಟೆ ತನಕ ಜಾರಿಯಲ್ಲಿರಲಿದೆ. ಕೇರಳದ ರಾಜ್ಯದಾದ್ಯಂತ ಅಕ್ಟೋಬರ್ 31 ರ ತನಕ ನಿಷೇಧಾಜ್ಞೆ ಜಾರಿಗೆ ತರಲಾಗಿತ್ತು. ಆದರೆ ಕಾಸರಗೋಡು ಜಿಲ್ಲೆಯಲ್ಲಿ ಒಂದು ವಾರಕ್ಕೆ ಸೀಮಿತಗೊಳಿಸಲಾಗಿದೆ. ಸೋಂಕು ನಿಯಂತ್ರಣಕ್ಕೆ ಬಾರದಿದ್ದಲ್ಲಿ ನಿಷೇಧಾಜ್ಞೆಯನ್ನು ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಮಂಜೇಶ್ವರ, ಕುಂಬಳೆ, ಬದಿಯಡ್ಕ, ಕಾಸರಗೋಡು, ವಿದ್ಯಾನಗರ, ಮೇಲ್ಪರಂಬ, ಬೇಕಲ, ಹೊಸದುರ್ಗ, ನೀಲೇಶ್ವರ, ಚಂದೇರ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಪರಪ್ಪ, ಒಡೆಯಂಚಾಲ್, ಪನತ್ತಡಿ ಪೇಟೆಗಳಲ್ಲಿ ಐದಕ್ಕಿಂತ ಅಧಿಕ ಮಂದಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಸಾಬೂನ್, ಸ್ಯಾನಿಟೈಸರ್ ಮೂಲಕ ಕೈಗಳನ್ನು ಶುಚಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ವಿವಾಹ ಸಮಾರಂಭಗಳಿಗೆ 50 ಮಂದಿ, ಮರಣ ಸಂಬಂಧಿ ಕಾರ್ಯಕ್ರಮಗಳಿಗೆ 20 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ. ಧಾರ್ಮಿಕ, ಪ್ರಾರ್ಥನೆ ಕಾರ್ಯಕ್ರಮಗಳು, ರಾಜಕೀಯ ಪಕ್ಷಗಳ ಸಭೆಗಳು, ಸಾಂಸ್ಕೃತಿಕ, ಸಾಮಾಜಿಕ, ಸಾರ್ವಜನಿಕ ಕಾರ್ಯಕ್ರಮಗಳಿಗೆ 20 ಮಂದಿಗೆ ಮಾತ್ರ ಭಾಗವಹಿಸಲು ಅನುಮತಿ ನೀಡಲಾಗಿದೆ.
ಸಾರ್ವಜನಿಕ ಸ್ಥಳ, ಬಸ್ಸು ನಿಲ್ದಾಣ, ಸಾರ್ವಜನಿಕ ಸಂಚಾರ, ಕಚೇರಿಗಳು, ಉದ್ಯೋಗ ಕೇಂದ್ರ ಹಾಗೂ ವ್ಯಾಪಾರ ಮಳಿಗೆ, ಆರೋಗ್ಯ ಕ್ಲಬ್, ಕ್ರೀಡಾ ತರಬೇತಿ, ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಜನಜಂಗುಳಿ ಉಂಟಾಗುವ ಮಾರುಕಟ್ಟೆ, ಬಸ್ಸು ತಂಗುದಾಣ ಮೊದಲಾದೆಡೆಗಳಲ್ಲಿ ದಿನಕ್ಕೆ ಕನಿಷ್ಠ ಒಂದು ಬಾರಿ ರೋಗಾಣು ಮುಕ್ತ ಔಷಧಿ ಸಿಂಪಡಿಸಬೇಕು ಎಂದು ಆದೇಶ ನೀಡಲಾಗಿದೆ. ಈ ಬಗ್ಗೆ ಸ್ಥಳೀಯ ಸಂಸ್ಥೆ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ. ಜನರು ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಗೊಳಿಸುವ ನಿಟ್ಟಿನಲ್ಲಿ ಪೊಲೀಸರು ನಿಗಾ ಇರಿಸಲಿದ್ದಾರೆ.