ಮಂಗಳೂರು, ಅ. 03 (DaijiworldNews/MB) : ಶನಿವಾರ ಉಳ್ಳಾಲ ಪುರಸಭೆ ಆಯುಕ್ತರಾದ ರಾಯಪ್ಪ ಅವರು, ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯತೆಯ ಬಗ್ಗೆ ಜನರು ಮತ್ತು ಬೀದಿ ಬದಿ ವ್ಯಾಪಾರಿಗಳಲ್ಲಿ ಜಾಗೃತಿ ಮೂಡಿಸಿದರು. ಹಾಗೆಯೇ ಮಾಸ್ಕ್ ಹಾಕದವರಿಗೆ ದಂಡ ವಿಧಿಸಿದರು.

ಉಳ್ಳಾಲ, ತೊಕ್ಕೊಟ್ಟು ಒಳಪೇಟೆ, ಪಂಡಿತ್ ಹೌಸ್ ಜಂಕ್ಷನ್ ಮೊದಲಾದೆಡೆ ಮಾಸ್ಕ್ ಧರಿಸದವರಿಂದ ಉಳ್ಳಾಲ ಪುರಸಭೆ ಆಯುಕ್ತರಾದ ರಾಯಪ್ಪ ಅವರು ದಂಡ ವಸೂಲಿ ಮಾಡಿದರು. ಹಾಗೆಯೇ ಮಾಸ್ಕ್ ಧರಿಸದೆ ವ್ಯಾಪಾರ ನಡೆಸುತ್ತಿರುವವರ ಮೇಲೆಯೂ ದಂಡ ವಿಧಿಸಿದರು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮೊದಲ ಬಾರಿಗೆ ಕೊರೊನಾ ನಿಯಮ ಪಾಲಿಸದಿದ್ದರೆ 1,000 ರೂ.ಗಳ ದಂಡ ಮತ್ತು ಮತ್ತೆ ಎರಡನೇ ಬಾರಿ ಇದೇ ಅಪರಾಧ ಮಾಡಿದರೆ 2,000 ರೂ.ಗಳ ದಂಡವನ್ನು ವಿಧಿಸಲಾಗುವುದು. ಮೂರನೇ ಬಾರಿಗೆ ಉಲ್ಲಂಘನೆ ಕಂಡುಬಂದಲ್ಲಿ, ಅಂಗಡಿಯ ಪರವಾನಗಿ ರದ್ದುಗೊಳಿಸಲಾಗುತ್ತದೆ ಎಂದು ವಿವರಿಸಿದರು.
ಉಳ್ಳಾಲ ಪುರಸಭೆ ಆಯುಕ್ತರಾದ ರಾಯಪ್ಪ ಅವರು ಕರ್ತವ್ಯ ಸಮಯ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗುವುದಾದರೂ ಅವರು ಬೆಳಿಗ್ಗೆ 8 ಗಂಟೆಗೆ ಏಕಾಂಗಿಯಾಗಿ ಮಾಸ್ಕ್ ಹಾಕುವ ಅಗತ್ಯತೆ ಬಗ್ಗೆ ಜನರಿಗೆ ಅರಿವು ಮೂಡಿಸಿ ಜನರ ಮೆಚ್ಚುಗೆಗೆ ಪಾತ್ರವಾದರು.