ಮಂಗಳೂರು, ಅ. 03 (DaijiworldNews/MB) : ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಶ್ ಅವರ ಆಶ್ರಯದಲ್ಲಿ ಕಳವಾದ ಸ್ವತ್ತು ಮರಳಿಸುವ ಕವಾಯತು ಅಕ್ಟೋಬರ್ 3 ರ ಶನಿವಾರ ಪೊಲೀಸ್ ಮೈದಾನದಲ್ಲಿ ನಡೆಯಿತು.












































ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾದ ಆಭರಣಗಳು, ವಾಹನಗಳು ಸೇರಿದಂತೆ 9.05 ಕೋಟಿ ರೂ.ಗಳ ಆಸ್ತಿಯನ್ನು 2019-20ನೇ ಸಾಲಿನಲ್ಲಿ ವಶಪಡಿಸಿಕೊಳ್ಳಲಾಗಿದ್ದು ಕಳವಾದ ಸ್ವತ್ತು ಮರಳಿಸುವ ಕವಾಯತು ಕಾರ್ಯಕ್ರಮದಲ್ಲಿ ಈ ಸ್ವತ್ತುಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ 1.49 ಕೋಟಿ ರೂ.ಗಳ ಆಸ್ತಿಯನ್ನು ಸರಿಯಾದ ಮಾಲೀಕರಿಗೆ ಹಸ್ತಾಂತರಿಸಲಾಗಿದ್ದು ಈ ಪೈಕಿ 2.277 ಕೆಜಿ ಚಿನ್ನ, 25 ದ್ವಿಚಕ್ರ ವಾಹನಗಳು, 19 ಮೊಬೈಲ್ ಫೋನ್, 11 ಇತರ ಆಸ್ತಿಗಳು ಮತ್ತು 48,13,951 ರೂ. ಆಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರು, ''ನ್ಯಾಯಾಲಯದಿಂದ ಅನುಮತಿ ಪಡೆದ ನಂತರ, 1.49 ಕೋಟಿ ರೂ. ಮೌಲ್ಯದ ಆಸ್ತಿಯನ್ನು ನಿಜವಾದ ಮಾಲೀಕರಿಗೆ ಹಿಂದಿರುಗಿಸಲು ಇಲ್ಲಿ ಈ ಕವಾಯತು ನಡೆಸಲಾಗುತ್ತಿದೆ'' ಎಂದು ಹೇಳಿದರು.
ಹಾಗೆಯೇ, ''ನಗರದ ಕೆಲವು ರಸ್ತೆಗಳು ತುಂಬಾ ಕಿರಿದಾಗಿದ್ದು ಈ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ನಗರದಲ್ಲಿ ಸಂಚಾರ ಸಮಸ್ಯೆ ಒಂದು ಪ್ರಮುಖ ವಿಷಯವಾಗಿದೆ. ನಾವು ಈ ಬಗ್ಗೆ ನಗರದಲ್ಲಿ ಅಧ್ಯಯನ ಮತ್ತು ಮೌಲ್ಯಮಾಪನವನ್ನು ಒಂದು ತಿಂಗಳು ನಡೆಸಿ ಪಾರ್ಕಿಂಗ್ ಸ್ಥಳಗಳನ್ನು ಹಾಗೂ ನೋ ಪಾರ್ಕಿಂಗ್ ಝೋನ್ಗಳನ್ನು ಗುರುತಿಸಿದ್ದೇವೆ. ಈ ಪ್ರದೇಶಗಳಲ್ಲಿ ಬೋರ್ಡ್ಗಳನ್ನು ಅಳವಡಿಸಲಾಗುವುದು. ಜನರು ಆ ನಿಯಮವನ್ನು ಅನುಸರಿಸಬೇಕು. ಯಾವುದೇ ಪಾರ್ಕಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದರೆ ಭಾರಿ ದಂಡ ವಿಧಿಸಲಾಗುವುದು ಮತ್ತು ವಾಹನಗಳನ್ನು ವಶಕ್ಕೆ ಪಡೆಯಲಾಗುವುದು'' ಎಂದು ಈ ಸಂದರ್ಭದಲ್ಲೇ ತಿಳಿಸಿದ್ದಾರೆ.
ಇನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, "ತನಿಖೆ ಪ್ರಗತಿಯಲ್ಲಿದೆ. ಎಲ್ಲಾ ವಿಷಯಗಳ ಬಗ್ಗೆ ವಿವರವಾಗಿ ಪರಿಶೀಲಿಸಿ ತನಿಖೆ ನಡೆಸಲಾಗುತ್ತಿದೆ. ತನಿಖೆ ಮುಗಿದ ನಂತರ, ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುತ್ತದೆ'' ಎಂದು ಹೇಳಿದರು.