ಮಂಗಳೂರು, ಅ. 03(DaijiworldNews/PY): ಮಂಗಳೂರು ದಸರಾ ಹಬ್ಬದ ಆಚರಣೆ ಹಿನ್ನೆಲೆ, ಕೊರೊನಾ ಮಾರ್ಗಸೂಚಿ ಪಾಲಿಸಿ ಹಬ್ಬ ಆಚರಿಸಬಹುದು ಎಂದು ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ.


ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮೂರನೇ ಜಿಲ್ಲಾ ಧಾರ್ಮಿಕ ಪರಿಷತ್ತ್ ಐದನೇ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ದಸರಾ ಹಬ್ಬದಲ್ಲಿ ಹೆಚ್ಚಿನ ಜನಸಂದಣಿ ಸೇರುವ ಪ್ರತಿಯೊಂದು ದೇವಸ್ಥಾನಗಳಲ್ಲಿ ಭಕ್ತಾದಿಗಳಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ಹಾಗೂ ಮಾಸ್ಕ್ ಧರಿಸುವಿಕೆಯನ್ನು ಕಡ್ಡಾಯ ಮಾಡಬೇಕು ಎಂದು ತಿಳಿಸಿದ್ದಾರೆ.
ಸಾಂಪ್ರದಾಯಿಕವಾಗಿ ಸಂಘ-ಸಂಸ್ಥೆಗಳು ಶಾರದಾ ಮೂರ್ತಿಗಳಲ್ಲಿಯೂ ರಸ್ತೆಯ ಬದಿ ಅಥವಾ ಇನ್ನಿತರ ಕಡೆ ಪ್ರತಿಷ್ಠಾಪಿಸುವ ಕಡೆಗಳಲ್ಲಿಯೂ ಯಾವುದೇ ಸಭಾ ಕಾರ್ಯಕ್ರಮ ಸಾಂಸ್ಕೃತಿಕ ಅವಕಾಶ ನೀಡದಂತೆ ಸರಳವಾಗಿ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು.
ಈ ಬಾರಿಯ ದಸರಾ ಹಬ್ಬದಲ್ಲಿ ಹುಲಿ ವೇಷ ತಂಡಗಳಿಗೆ ಅವಕಾಶ ನಿರ್ಬಂಧಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೇವಸ್ಥಾನದ ಆವರಣದ ಒಳಗೆ ಸಾಮಾಜಿಕ ಅಂತರದಲ್ಲಿ ಕುರ್ಚಿಗಳನ್ನಿರಿಸಿ, ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಯಾವುದೇ ದೊಡ್ಡ ಗಾತ್ರದ ಶಾಮಿಯಾನ , ಚಪ್ಪರ ಹಾಕಲು ಅವಕಾಶವಿಲ್ಲ. ಅಲ್ಲದೇ, ಹಬ್ಬದಲ್ಲಿ ಜಾತ್ರೆ, ಸಂತೆಗಳಿಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಜನರ ಆರೋಗ್ಯದ ಹಿತದೃಷ್ಟಿಯಿಂದ ಮುಂಬರುವ ದೀಪಾವಳಿ ಹಬ್ಬದಲ್ಲಿ ಸುಡುಮದ್ದು, ಪಟಾಕಿಯ ಶೇಖರಣೆ, ಮಾರಾಟ ಹಾಗೂ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ.