ಮಂಗಳೂರು, ಅ. 04 (DaijiworldNews/HR): ಖ್ಯಾತ ಹೃದ್ರೋಗ ತಜ್ಞ ಡಾ. ಆನಂದ್ ವೀರಣ್ಣ ಶೆಟ್ಟಿ(85) ಶನಿವಾರ ರಾತ್ರಿ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಡಾ.ಎ.ವಿ.ಶೆಟ್ಟಿ ಅವರು ಕುಂದಾಪುರದಿಂದ ಬಂದು ಜನಪ್ರಿಯರಾಗಿದ್ದರು, ಅವರು ಪ್ರವರ್ತಕ ವೈದ್ಯರಾಗಿದ್ದರು ಮತ್ತು ಜಿಲ್ಲೆಯ ಮೊದಲ ಹೃದ್ರೋಗ ತಜ್ಞರಾಗಿ ಗುರುತಿಸಿಕೊಂಡರು. ಮುಂಬೈ ವಿಶ್ವವಿದ್ಯಾಲಯದಿಂದ 'ಪ್ರಿನ್ಸ್ ಆಫ್ ವೇಲ್ಸ್' ಚಿನ್ನದ ಪದಕ ಪಡೆದಿದ್ದರು.
ಅವರು 1962 ರಲ್ಲಿ ಎಡಿನ್ಬರ್ಗ್ನ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ನಲ್ಲಿ ಅಧ್ಯಯನ ಮಾಡಿ, 1963 ರಲ್ಲಿ ಎಂಆರ್ಸಿಪಿ ಪದವಿಯನ್ನು ಪೂರ್ಣಗೊಳಿಸಿದರು ಮತ್ತು 1974 ರಲ್ಲಿ ಎಫ್ಆರ್ಸಿಪಿ ಪದವಿಯನ್ನು ಪಡೆದರು. ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಹೃದ್ರೋಗ ವಿಭಾಗದ ಪ್ರಾಧ್ಯಾಪಕರಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದರು ಮತ್ತು ನಿವೃತ್ತಿಯ ನಂತರ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
ರೋಟರಿ ಕ್ಲಬ್ ಆಫ್ ಮಂಗಳೂರಿನ ಅತ್ಯಂತ ಹಿರಿಯ ಸೇವೆ ಸಲ್ಲಿಸುತ್ತಿರುವ ಸದಸ್ಯರಲ್ಲಿ ಡಾ.ಎ.ವಿ ಶೆಟ್ಟಿ ಒಬ್ಬರು ಮತ್ತು ಅದರ ಅಧ್ಯಕ್ಷರೂ ಆಗಿದ್ದರು. ಫ್ರೀಮಾಸನ್ಸ್ನ ಸದಸ್ಯರಾಗಿದ್ದ ಅವರು ಮಂಗಳೂರು ಕ್ಲಬ್ನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇನ್ನು ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸ್ಥಾಪಕ ಟ್ರಸ್ಟಿಯಾಗಿದ್ದರು ಮತ್ತು ಶಕ್ತಿ ಶಿಕ್ಷಣ ಟ್ರಸ್ಟ್ನ ಸಲಹೆಗಾರರಾಗಿದ್ದರು. ಡಾ.ಎ.ವಿ.ಶೆಟ್ಟಿ ಅವರ ನಿಧನಕ್ಕೆ ಸಂತನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪಕ ಟ್ರಸ್ಟಿ ಕೆ.ಸಿ.ನಾಯಕ್ ಸಂತಾಪ ಸೂಚಿಸಿದ್ದಾರೆ.
ನಗರದ ಕದ್ರಿ ಕಾಂಬ್ಲಾ ಅಡ್ಡ ರಸ್ತೆಯ ನಿವಾಸಿಯಾಗಿರುವ ಡಾ.ಎ.ವಿ.ಶೆಟ್ಟಿ, ಪತ್ನಿ ಚಂದ್ರ, ಇಬ್ಬರು ಪುತ್ರಿಯರು ಮತ್ತು ಒಬ್ಬ ಮಗನನು ಅಗಲಿದ್ದಾರೆ.