ಪುತ್ತೂರು, ಅ. 04(DaijiworldNews/PY): ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕೃಷಿಕ ತಾಲೂಕಿನ ಒಳಮೊಗ್ರು ಗ್ರಾಮದ ಬೊಳ್ಳಾಡಿ ನಿವಾಸಿ ಇಬ್ರಾಹಿಂ ಹಾಜಿ (99) ಅವರು ಅ.4ರ ಭಾನುವಾರದಂದು ಸ್ವಗೃಹದಲ್ಲಿ ನಿಧನರಾದರು.

1934ರಲ್ಲಿ ಮಹಾತ್ಮ ಗಾಂಧೀಜಿ ಅವರು ಪುತ್ತೂರಿಗೆ ಆಗಮಿಸಿದ ವೇಳಿ ಇಬ್ರಾಹಿಂ ಹಾಜಿ ಅವರು ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದು, ಅವರು ಗಾಂಧೀಜಿ ಅವರೊಂದಿಗೆ ಬೆಂಗಳೂರು ತನಕ ಜಾಥಾದಲ್ಲಿ ನಡೆದಿದ್ದರು. ಸ್ವಾತಂತ್ರ್ಯಕ್ಕಾಗಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಹಾಜಿ ಅವರು ಲಾಠಿ ಏಟು, ಪ್ರತಿಭಟನೆಳಲ್ಲಿ ಪಾಲ್ಗೊಂಡಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
ಹಾಜಿ ಅವರು ಒಳಮೊಗ್ರು ಗ್ರಾಮ ಪಂಚಾಯಿತ್ನ ಮಾಜಿ ಸದಸ್ಯರಾಗಿದ್ದರು. ಅವರು ಶೇಖಮಲೆ ಜಮಾಅತ್ನ ಮಾಜಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಶಾಲೆಯ ನಿರ್ಮಾಣಕ್ಕೆ ಸಂಬಂಧಿಸಿದ ಭೂ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿದ್ದು, ಸಮಸ್ಯೆಯನ್ನು ಬಗೆಹರಿಸಿ ಶಾಲೆ ನಡೆಯಲು ಅವಕಾಶ ಮಾಡಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಇಬ್ರಾಹಿಂ ಹಾಜಿ ಅವರು ತಮ್ಮ ಇಳಿವಯಸ್ಸಿನಲ್ಲಿಯೂ ರೈತರ ಚಳವಳಿಯಲ್ಲಿ ಭಾಗವಹಿಸುತ್ತಿದ್ದರು ಹಾಗೂ ರಾಜ್ಯ ರೈತರ ಸಂಘದ ಹಸಿರು ಸೇನೆ ಸದಸ್ಯರಾಗಿದ್ದರು.
ಮೃತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಧಫನ ಕಾರ್ಯವನ್ನು ಶೇಖಮಲೆ ಮಸೀದಿಯ ಆವರಣದಲ್ಲಿ ನಡೆಸಲಾಯಿತು.
ಪುತ್ತೂರು ಬ್ಲಾಕ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಇಬ್ರಾಹಿಂ ಹಾಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.