ಮಂಗಳೂರು, ಅ. 04 (DaijiworldNews/SM): ಸರಕಾರದ ಕೊವಿಡ್ ಮಾರ್ಗಸೂಚಿಯಂತೆ ದಸರಾ ಆಚರಣೆ ಮಾಡಲು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ನಿರ್ಧರಿಸಿದೆ.

ಮಂಗಳೂರು ದಸರಾ ವೈಭವದಿಂದ ನಡೆಸಲು ಸಾಧ್ಯವಿಲ್ಲ. ಸಂಪ್ರದಾಯ ಪ್ರಕಾರ ದೇವರ ಸೇವೆ ನಡೆಸುವುದು ಅನಿವಾರ್ಯ. ಧಾರ್ಮಿಕ ನಂಬಿಕೆ, ಸಂಪ್ರದಾಯ ಪ್ರಕಾರ ದಸರಾ ಮಹೋತ್ಸವ ನಡೆಸಲಾಗುವುದು. ಭಕ್ತರ ಸುರಕ್ಷತೆ ದೃಷ್ಟಿಯಿಂದ ಆಗಮನ-ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು.
“ನಮ್ಮ ದಸರಾ-ನಮ್ಮ ಸುರಕ್ಷೆ” ಘೋಷವಾಕ್ಯದೊಂದಿಗೆ ಈ ಬಾರಿಯ ದಸರಾ ಆಚರಣೆ ಮಾಡಲಾಗುವುದು. ದೇಗುಲಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ಬಳಕೆ ಕಡ್ಡಾಯವಾಗಿದ್ದು, ಭಕ್ತಾದಿಗಳಿಗೆ ಥರ್ಮಲ್ ಸ್ಕ್ಯಾನ್ ಮಾಡಲಾಗುವುದು ಎಂದು ಕ್ಷೇತ್ರದ ಆಡಳಿತ ಮಂಡಳಿ, ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನು ದಸರಾ ಸಂದರ್ಭ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸಕಲ ವ್ಯವಸ್ಥೆ ಕಲ್ಪಿಸಲು ಹಾಗೂ ಯಾವುದೇ ಸಮಸ್ಯೆಯುಂಟಾಗದಂತೆ ಕಾರ್ಯನಿರ್ವಹಿಸಲು ಸ್ವಯಂ ಸೇವಕ ಪಡೆ ಕಾರ್ಯನಿರ್ವಹಿಸಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.