ವಿಟ್ಲ, ಅ. 05 (DaijiworldNews/MB) : ವಿಟ್ಲ ಕಸಬಾ ಗ್ರಾಮದ ಕಾಂತಡ್ಕ ಎಂಬಲ್ಲಿ ಮಾದಕದ್ರವ್ಯ ಗಾಂಜಾದಿಂದ ಎಣ್ಣೆ ಹೊರ ತೆಗೆದು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರನ್ನೊಳಗೊಂಡ ವಿಟ್ಲ ಠಾಣೆಯ ಪೊಲೀಸ್ ತಂಡ ವಶಕ್ಕೆ ಪಡೆದುಕೊಂಡಿದೆ.

ವಿಟ್ಲ ಕಸಬಾ ಗ್ರಾಮದ ಉಕ್ಕುಡ ನಿವಾಸಿ ಅಬ್ದುಲ್ ಖಾದರ್ ಯಾನೆ ಅದ್ದು (25) ಬಂಧಿತ ಆರೋಪಿ.
ಅಕ್ರಮವಾಗಿ ಮಾದಕ ವಸ್ತುಗಳನ್ನು ಸಂಗ್ರಹ ಮಾಡಿ ಮಾರಾಟ ಮಾಡುವ ಮಾಹಿತಿ ಹಿನ್ನೆಲೆಯಲ್ಲಿ ವೃತ್ತ ನಿರೀಕ್ಷಕರ ಅಪರಾಧ ಪತ್ತೆ ದಳ ಹಾಗೂ ವಿಟ್ಲ ಠಾಣೆಯ ಸಿಬ್ಬಂದಿಗಳ ಜತೆಗೆ ಕಾರ್ಯಾಚರಣೆ ನಡೆಸಲಾಗಿದ್ದು, ಈ ವೇಳೆ ಆತನ ಅನುಮಾನಾಸ್ಪದ ವರ್ತನೆಯಿಂದ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಗಾಂಜಾ ಎಣ್ಣೆ (ಹ್ಯಾಶಿಶ್ ಆಯಿಲ್) ತಯಾರಿಸಿ ಮಾರಾಟ ಮಾಡುವ ಬಗ್ಗೆ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ.
ಆತನಿಂದ ಸುಮಾರು 300 ಗ್ರಾಂ ತೂಕದ ಗಾಂಜಾ ಎಣ್ಣೆ, 40 ಗ್ರಾಂ ಮೊಗ್ಗು ಕಾಯಿ ಮಿಶ್ರಿತ ಗಾಂಜಾವನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗಿದೆ. ಆತನ ಮೇಲೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರ ಪ್ರದೇಶದ ವಿಶಾಖಪಟ್ಟಣದ ಗಾಂಜಾ ಪೆಡ್ಲರ್ಗಳ ಜತೆಗೆ ಬಂಧಿತ ಆರೋಪಿಗೆ ನಿರಂತರ ಸಂಪರ್ಕ ಇರುವ ಬಗ್ಗೆ ಮಾಹಿತಿ ದೊರೆತಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಆರೋಪಿತ ಕಳೆದ ಒಂದು ವರ್ಷದಿಂದ ಬೆಂಗಳೂರು ಭಾಗದಲ್ಲಿ ಗಾಂಜಾ ಹಾಗೂ ಗಾಂಜಾ ಎಣ್ಣೆಯನ್ನು ಮಾರಾಟ ಮಾಡುವ ಜಾಲವನ್ನು ಹೊಂದಿದ್ದ ಎನ್ನಲಾಗಿದೆ. ಆದರೆ ಅಲ್ಲಿಯ ಪೊಲೀಸರ ಕೈಗೆ ಈತ ಸಿಕ್ಕಿಬೀಳದೇ, ದಕ್ಷಿಣ ಕನ್ನಡ ಜಿಲ್ಲೆಗೆ ತನ್ನ ಜಾಲವನ್ನು ವಿಸ್ತರಣೆ ಮಾಡುವ ಪ್ರಯತ್ನದಲ್ಲಿದ್ದ ವೇಳೆ ಪೊಲೀಸರ ಅತಿಥಿಯಾಗಿದ್ದಾನೆ.
ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್ ಮಾರ್ಗದರ್ಶನದಲ್ಲಿ ಬಂಟ್ವಾಳ ಸಹಾಯಕ ಅಧೀಕ್ಷಕ ವೆಲೆಂಟನ್ ಡಿಸೋಜ್ ನಿರ್ದೇಶನದಂತೆ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರನ್ನೊಳಗೊಂಡ ವಿಟ್ಲ ಠಾಣಾ ಉಪನಿರೀಕ್ಷಕ ವಿನೋದ್ ಎಸ್. ಕೆ., ಬಂಟ್ವಾಳ ಸಂಚಾರಿ ಠಾಣೆಯ ಉಪನಿರೀಕ್ಷಕ ರಾಜೇಶ್ ಕೆ. ವಿ., ವಿಟ್ಲ ಪ್ರೋಬೆಷನರಿ ಉಪನಿರೀಕ್ಷಕ ಕೃಷ್ಣಕಾಂತ್, ಸಿಬ್ಬಂದಿಗಳಾದ ಗೋಣಿಬಸಪ್ಪ, ಕುಮಾರ್, ವಿವೇಕ್, ವಿಟ್ಲ ಸಿಬ್ಬಂದಿಗಳಾದ ಕೆ. ಟಿ. ಜಯರಾಮ, ಪ್ರಸನ್ನ, ಲೋಕೇಶ್, ಪ್ರತಾಪ, ವಿನಾಯಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.