ಕುಂದಾಪುರ, ಅ. 05 (DaijiworldNews/MB) : ಕುಂದಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆದ ಸರಣಿ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. . ಒಂದು ವರ್ಷದ ಹಿಂದೆ ಮೂರು ಕಳ್ಳತನ ಘಟನೆಗಳು ನಡೆದಿವೆ.

ಬಂಧಿತರನ್ನುಹೊನ್ನಾವರದ ಮಂಕಿ ಗ್ರಾಮದ ವಿಲ್ಸನ್ ಪಿಯದಾಸ್ ಲೋಪಿಸ್ (29) ಹಾಗೂ ತೊಕೆಟ್ಟೆಯ 2 ನೇ ಕ್ರಾಸ್ ನಿವಾಸಿ ಗಂಗಾಧರ್ (40) ಎಂದು ಗುರುತಿಸಲಾಗಿದೆ.
ಮೊದಲನೆ ಪ್ರಕರಣ 2019 ರ ಮೇ 5 ರಂದು ಕಾವ್ರಾಡಿ ಗ್ರಾಮದ ಮುಳ್ಳುಗುಡ್ಡೆಯಲ್ಲಿ ನಡೆಯಿತು. ಮನೆ ಮಾಲೀಕ ನಾಗರಾಜ್ ಅವರ ದೂರಿನ ಪ್ರಕಾರ, ಅವರ ಕುಟುಂಬವು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಛಾವಣಿಯಲ್ಲಿನ ಅಂಚುಗಳನ್ನು ತೆಗೆದು ಒಳಬಂದಿರುವ ಕಳ್ಳರು ಚಿನ್ನ, ಬೆಳ್ಳಿ ಮತ್ತು ಕಬ್ಬಿಣದ ಪೆಟ್ಟಿಗೆ ಹಾಗೂ ಒಟ್ಟು 64,900 ರೂ. ನಗದು ಕಳವು ಮಾಡಿದ್ದರು.
ಎರಡನೇ ಕಳ್ಳತನ ಪ್ರಕರಣವು 2019 ರ ಜೂನ್ 17 ರಂದು ಬಸ್ರೂರು ಗ್ರಾಮದ ಕೋಲ್ಕೇರಿಯಲ್ಲಿ ನಡೆದಿತ್ತು. ಕಳ್ಳರು ಮನೆಯ ಛಾವಣಿಯ ಮೂಲಕ ಮನೆಯೊಳಗೆ ಪ್ರವೇಶಿಸಿ ಕಪಾಟಿನಲ್ಲಿದ್ದ ಆಭರಣ ಮತ್ತು 2 ಲಕ್ಷ ರೂ.ಗಳ ನಗದನ್ನು ಲೂಟಿ ಮಾಡಿದ್ದರು. ಈ ಸಂದರ್ಭದಲ್ಲಿ ಮನೆ ಮಾಲೀಕರಾದ ಮಹಾಲಿಂಗ ಮತ್ತು ಕುಟುಂಬದವರು ಕೆಲಸಕ್ಕೆ ಹೋಗಿದ್ದರು.
ಮೂರನೇ ಕಳ್ಳತನ ಪ್ರಕರಣವು 2019 ರ ನವೆಂಬರ್ 26 ರಂದು ಕುಂದಾಪುರ ರೈಲ್ವೆ ಗೆಸ್ಟ್ಹೌಸ್ನಲ್ಲಿ ವಾಸವಿದ್ದ ಸುಬ್ಬಾ ದೇವಾಡಿಗ ಹಾಗೂ ಕುಟುಂಬಸ್ಥರು ರಾತ್ರಿ ವೇಳೆ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ನಡೆದಿತ್ತು. ಕಳ್ಳರು ಕಪಾಟಿನಿಂದ ಆಭರಣ ಮತ್ತು ನಗದು ಕಳವು ಮಾಡಿದ್ದರು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು ಬಂಧಿತರಿಂದ 64.76 ಗ್ರಾಂ ಚಿನ್ನ ಮತ್ತು 112 ಗ್ರಾಂ ಬೆಳ್ಳಿ ಮತ್ತು ಇಸ್ತ್ರಿ ಪೆಟ್ಟಿಗೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಲ್ಸನ್ ಬಸ್ರೂರು ಮತ್ತು ಕಟ್ಕೆರಿಯಲ್ಲಿ ಬಾಡಿಗೆ ಮನೆಯಲ್ಲಿದ್ದು ಚಿನ್ನವನ್ನು ಕಳವು ಮಾಡಿ ಗಂಗಾಧರನಿಗೆ ಕೊಡುತ್ತಿದ್ದನು. ಗಂಗಾಧರ ಕುಂದಾಪುರದ ಸಹಕಾರಿ ಸಂಘದಲ್ಲಿ ಈ ಚಿನ್ನವನ್ನು ಅಡವು ಇಡುತ್ತಿದ್ದನು. ಇನ್ನು ವಿಲ್ಸನ್ನನ್ನು ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಭಟ್ಕಳ ಮತ್ತು ಮಂಕಿ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣಗಳು ದಾಖಲಾಗಿದೆ.