ಬೆಂಗಳೂರು, ಮೇ 16 : ಅಧಿಕಾರ ಹಿಡಿಯಲು ಬಿಜೆಪಿ ಅತ್ಯಾವಸರ ಮಾಡುತ್ತಿದ್ದು, ಬಿಜೆಪಿಗೆ ಬಹುಮತ ಪಡೆಯಲು ಇನ್ನು8 ಶಾಸಕರ ಕೊರತೆ ಇದ್ದರೂ ಅಧಿಕಾರದಾಹದಿಂದ ಬಿಜೆಪಿ ಕುದುರೆ ವ್ಯಾಪಾರಕ್ಕೆ ಹೊರಟಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಪಕ್ಷದ ಶಾಸಕಾಂಗ ಸಭೆಯ ನಂತರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದ್ದಾರೆ.
ಕೋಟಿ ಕೋಟಿ ದುಡ್ಡಿನ ಮೂಲಕ ಅಪರೇಷನ್ ಕಮಲ ಮಾಡ ಹೊರಟಿರುವ ಬಿಜೆಪಿ ಬ್ಲಾಕ್ ಮನಿ ಅಥವಾ ವೈಟ್ ಮನಿ ನೀಡುತ್ತದೆಯೋ ಎನ್ನುವುದು ನನ್ನ ಅನುಮಾನ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಸರ್ಕಾರ ರಚನೆ ನಿಟ್ಟಿನಲ್ಲಿ ಕಾಂಗ್ರೆಸ್ -ಜೆಡಿಎಸ್ ನಡುವಿನ ಮೈತ್ರಿಯಲ್ಲಿ ಯಾವುದೇ ಅನುಮಾನವಿಲ್ಲಾ ಎಚ್. ಡಿ. ಕುಮಾರಸ್ವಾಮಿ ಸ್ಪಷ್ಪಪಡಿಸಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಗೆ ಬೆಂಬಲ ಘೋಷಿಸಿರುವುದರಿಂದ ಒಟ್ಟು ಸದಸ್ಯರ ಸಂಖ್ಯೆ 117 ಆಗಿದ್ದು, ರಾಜ್ಯಪಾಲರ ಮುಂದೆ ಸರ್ಕಾರ ರಚನೆಯ ಹಕ್ಕು ಮಂಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.