ಬೆಂಗಳೂರು, ಮೇ 16 : ಒಂದೆಡೆ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲೇ ತನ್ನವರಿಂದಲೇ ನಿಂದನೆಗೆ ಒಳಗಾದ ಸಿದ್ದರಾಮಯ್ಯ ಅವರ ವಿರುದ್ದ ಮಾಜಿ ಶಾಸಕ ಕೆ.ಬಿ ಕೋಳಿವಾಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ನೇರ ಹೊಣೆ ಎಂದು ಕಿಡಿಕಾರಿದ್ದಾರೆ. ಬೆಂಗಳೂರಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಅಪ್ಪಟ ಕಾಂಗ್ರೆಸ್ಸಿಗ. ಸ್ಪೀಕರ್ ಆಗಿ ಸರಿಯಾಗಿ ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಅದರೆ ಕಾಂಗ್ರೆಸ್ ನ ರಕ್ತ ಸಿದ್ದರಾಮಯ್ಯ ನಲ್ಲಿ ಇಲ್ಲ, ಜಾತಿ ಮತ್ತು ಅಧಿಕಾರ ಇದ್ದರೆ ಆತ ಏನೂ ಬೇಕಾದರೂ ಮಾಡುತ್ತಾನೆ ಎಂದು ನಿಂದಿಸಿದ್ದಾರೆ.
ಸಿದ್ದರಾಮಯ್ಯ ರಾಜಕೀಯ ಪರಿಸ್ಥಿತಿ ಬದಲಾದಂತೆ ಪಕ್ಷವನ್ನು ತನ್ನಿಚ್ಚೆಯಂತೆ ಬಳಕೆ ಮಾಡಿಕೊಂಡಿದ್ದಾನೆ. ಹಿಂದಿನ ಚುನಾವಣೆಯಲ್ಲಿ ಪರಮೇಶ್ವರ್ ಸೋಲಿಗೆ ಇವನೇ ಕಾರಣವಾಗಿದ್ದ. ಕಳೆದ ಬಾರಿ ಇನಮದಾರ್ ಹಾಗೂ ನನ್ನನ್ನು ಸೊಲೀಸೋಕೆ ಇವನು ಪ್ರಯತ್ನ ಪಟ್ಟ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಈಗ ಕೆಪಿಜೆಪಿ ಅಭ್ಯರ್ಥಿ ಆರ್ ಶಂಕರ್ ಗೆ ಸಿದ್ದರಾಮಯ್ಯ ಬೆಂಬಲಿಸಿದ್ದಾನೆ. ಈ ಬಾರಿಯ ಚುನಾವಣೆಯಲ್ಲಿ ನನ್ನನ್ನೇ ಮರೆತು ಅವನಿಗೆ ಸಪೋರ್ಟ್ ಮಾಡಿ ಗೆಲ್ಲಿಸಿದ. ಈ ಮನುಷ್ಯನನ್ನು ಕಾಂಗ್ರೆಸ್ ನಲ್ಲಿ ಉಳಿಸಿಕೊಳ್ಳಬಾರದು.
ಇವನನ್ನು ಕೆಪಿಸಿಸಿ ಅಧ್ಯಕ್ಷನಾಗಿ ಮಾಡಿದರೆ ಕಾಂಗ್ರೆಸ್ ಉಳಿಯುವುದಿಲ್ಲ. ನಾನು ಈ ಸಂಬಂಧ ಹೈ ಕಮಾಂಡ್ ಗೆ ಮನವಿ ಮಾಡುತ್ತೇವೆ. ಪರಮೇಶ್ವರ್, ಒಕ್ಕಲಿಗನಾಗಿ ಡಿಕೆಶಿ ಅಥವಾ ಲಿಂಗಾಯಿತ ನಾಯಕರನ್ನು ಯಾರನ್ನಾದರೂ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಎಂದು ಹೇಳುವುದಾಗಿ ಕೋಳಿ ವಾಡ ಹೇಳಿದ್ದಾರೆ.