ಬಂಟ್ವಾಳ, ಅ. 05 (DaijiworldNews/SM): ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ 12 ದಿನಗಳಿಂದ ಕೆಲಸಕ್ಕೆ ಹಾಜರಾಗದೆ ಮುಷ್ಕರ ನಡೆಸುತ್ತಿದ್ದು, ಸೋಮವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ತಮ್ಮ ಬೇಡಿಕೆಗೆ ಸ್ಪಂದನೆ ನೀಡದ ಸರಕಾರದ ವಿರುದ್ಧ ಮೌನಪ್ರಾರ್ಥನೆ ಮೂಲಕ ಪ್ರತಿಭಟಿಸಿದರು.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘವು ಭಾರತೀಯ ಮಜ್ದೂರ್ ಸಂಘ(ಬಿಎಂಎಸ್)ದ ಸಹಯೋಗದೊಂದಿಗೆ ಸೆ. 24ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದು, ಸೋಮವಾರವೂ ಮುಷ್ಕರ ಮುಂದುವರಿದಿತ್ತು. ವೈದ್ಯಾಧಿಕಾರಿಗಳು ಸೇರಿದಂತೆ ಬಂಟ್ವಾಳ ತಾಲೂಕಿನಲ್ಲಿ ಒಟ್ಟು 120 ಮಂದಿ ಗುತ್ತಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಮಾತನಾಡಿ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಬೇಡಿಕೆ ನ್ಯಾಯಯುತವಾಗಿದ್ದು, ರಾಜ್ಯ ಸರಕಾರ ಅದಕ್ಕೆ ಸ್ಪಂದನೆ ನೀಡುವ ಭರವಸೆ ಇದೆ. ಪ್ರಸ್ತುತ ಸರಕಾರದಲ್ಲಿ ಸಚಿವರುಗಳು ಉತ್ತಮ ಕೆಲಸ ಮಾಡುತ್ತಿದ್ದು, ಅವರು ಕೇಂದ್ರದೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸುವ ವಿಶ್ವಾಸವಿದೆ. ಮುಂದೆ ಜಿ.ಪಂ.ಸಭೆಯಲ್ಲೂ ತಾನು ಈ ಬಗ್ಗೆ ವಿಷಯ ಪ್ರಸ್ತಾಪಿಸಿ ಇವರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಲಿದ್ದೇನೆ ಎಂದರು.
ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ ಅಧ್ಯಕ್ಷ ಪ್ರಭಾಕರ ದೈವಗುಡ್ಡೆ ಅವರು ಕೂಡ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಗುತ್ತಿಗೆ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಾ. ಪ್ರಕಾಶ್ಕುಮಾರ್, ಕಾರ್ಯದರ್ಶಿ ವಿಶ್ವನಾಥ ಪಿ. ಹಾಗೂ ಇತರ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.