ಮಂಗಳೂರು, ಅ. 06 (DaijiworldNews/SM): ವರ್ಷದ ಹಿಂದೆ ಮಳೆಗಾಲದಲ್ಲಿ ಪಚ್ಚನಾಡಿ ತ್ಯಾಜ್ಯ ಕುಸಿತವಾದ ಪರಿಣಾಮ ಕೃಷಿ ಭೂಮಿ ಸಹಿತ ಸಂಪೂರ್ಣ ಮಂದಾರ ಪ್ರದೇಶವೇ ನಾಶವಾಗಿತ್ತು. ಘಟನೆ ನಡೆದು ಒಂದು ವರ್ಷ ಕಳೆದರೂ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ ಎಂದಾಗಿ ದೈಜಿವರ್ಲ್ಡ್ ‘ನಿಮ್ಮೊಂದಿಗೆ ನಾವು’ ಕಾರ್ಯಕ್ರಮದ ಮೂಲಕ ಮಂದಾರ ಸಂತ್ರಸ್ತರ ನೋವಿಗೆ ಧ್ವನಿಯಾಗುವ ಪ್ರಯತ್ನ ನಡೆಸಿತ್ತು. ವರದಿ ಪ್ರಸಾರದ ಬಳಿಕ ಎಚ್ಚೆತ್ತುಕೊಂಡ ಆಡಳಿತ ವರ್ಗ ಸಂತ್ರಸ್ತರಿಗೆ ಮತ್ತೊಂದು ಹಂತದ ಪರಿಹಾರ ವಿತರಿಸಿದೆ.


ವರ್ಷದ ಹಿಂದೆ ಮಂದಾರ ದುರಂತ ಸಂಭವಿಸಿದ ಸಂದರ್ಭದಲ್ಲಿ ಮಂದಾರದಲ್ಲಿ ಸಂತ್ರಸ್ತರಾದವರ ನೆರವಿಗೆ ಧಾವಿಸಿ, ನಿರಂತರವಾಗಿ ಸುದ್ದಿ ಪ್ರಸಾರ ಮಾಡಲಾಗಿತ್ತು. ತಕ್ಷಣಕ್ಕೆ ಸಂತ್ರಸ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಆ ಬಳಿಕ ಮಂದಾರ ಎನ್ನುವ ಪ್ರದೇಶವನ್ನೊಮ್ಮೆ ನೋಡೋಣ ಎನ್ನುವ ಆಸೆಯೋ, ಸಂತ್ರಸ್ತರಿಗೆ ನೆರವಾಗುವ ಎನ್ನುವ ಮನಸ್ಸೋ ಎಂಬಂತೆ ಒಬ್ಬರ ಹಿಂದೆ ಒಬ್ಬ ಅಧಿಕಾರಿ, ಜನನಾಯಕರು ಭೇಟಿ ಕೊಟ್ಟು ಮರಳಿದ್ದರು. ಆದರೆ, ವರ್ಷ ಕಳೆಯುವ ತನಕವೂ ಯಾವುದೇ ಪರಿಹಾರದ ಮೊತ್ತ ಮಾತ್ರ ಸಂತ್ರಸ್ತರ ಖಾತೆ ಸೇರಿರಲಿಲ್ಲ.
ನೊಂದವರ ಅಳಲನ್ನು ಆಳಿಸಿ, ನಮ್ಮನ್ನಾಳುವ ಜನಪ್ರತನಿಧಿಗಳಿಗೆ, ಅಧಿಕಾರಿಗಳಿಗೆ ಜನರ ಸಂಕಷ್ಟ ಅರ್ಥೈಸುವ ಪ್ರಯತ್ನ ಮಾಡಿದ್ರೂ ಯಾರೊಬ್ಬರೂ ಆರಂಭದಲ್ಲಿ ಸ್ಪಂದನೆ ನೀಡಿರಲಿಲ್ಲ. ಆದರೆ, ವಾರದ ಹಿಂದೆ ದೈಜಿವರ್ಲ್ಡ್ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರ ಆದ ಬಳಿಕ ಜನಪ್ರತಿನಿಧಿಗಳು ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಪಾಲಿಕೆ ಸಾಮಾನ್ಯ ಸಭೆಯಲ್ಲೂ ಮಂದಾರ ವಿಷಯ ಪ್ರಸ್ತಾಪವಾಗಿದೆ. ಪಾಲಿಕೆ ಕಮೀಷನರ್ ಜತೆ ಮಾತನಾಡಿ ಸಮಸ್ಯೆ ತಿಳಿಸಿದ್ದೆವು. ಇದಕ್ಕೆ ಪ್ರತಿಯಾಗಿ ವ್ಯವಸ್ಥೆಯ ಬಗ್ಗೆ ಚರ್ಚಿಸಿ, ಪರಿಹಾರ ಮೊತ್ತ ಬಿಡುಗಡೆಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದಿದ್ದರು.
ಅಲ್ಲದೆ, ಬಳಿಕ ಮಹಾನಗರದಲ್ಲಿ ಮತ್ತೆ ಇಂತಹ ಕಹಿ ದಿನವೊಂದನ್ನು ಎದುರಿಸಬಾರದೆನ್ನುವ ನಿಟ್ಟಿನಲ್ಲಿ ಮನೆ ಮನೆ ತ್ಯಾಜ್ಯ ಸಂಗ್ರಹಕ್ಕೆ ಸಂಬಂಧಿಸಿ ಹಸಿ ಕಸ ಒಣ ಕಸ ವಿಂಗಡನೆ ಬಗ್ಗೆಯೂ ನಿರ್ಧಾರ ಕೈಗೊಂಡು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸಿದೆ. ಅಲ್ಲದೆ, ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸುವುದಕ್ಕೂ ಸಂಪೂರ್ಣ ಕಡಿವಾಣ ಹಾಕುವ ನಿರ್ಣಯ ಕೈಗೊಳ್ಳಲಾಗಿದೆ.
ಇಷ್ಟೇ ಅಲ್ಲದೆ, ನಮ್ಮ ಮತ್ತೊಂದು ಫಲ ಸಿಕ್ಕಿರುವುದೆಂದರೆ, ಸಂತ್ರಸ್ತರ ಖಾತೆಗೆ ಪರಿಹಾರದ ಮೊತ್ತ ಜಮೆ ಮಾಡಿರುವುದು. ಎರಡನೇ ಹಂತದ ಕೃಷಿ ಪರಿಹಾರ ಮೊತ್ತ ಸಂತ್ರಸ್ತರ ಕೈ ಸೇರಿದೆ. 2 ಕೋಟಿ ರೂಪಾಯಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಸಂತ್ರಸ್ತರ ಎಕೌಂಟ್ಗೆ ಹಣ ಜಮೆ ಮಾಡಲಾಗಿದ್ದು, ದೈಜಿವರ್ಲ್ಡ್ ವರದಿ ಪ್ರಸಾರದ ಬಳಿಕ ಎಚ್ಚೆತ್ತುಕೊಂಡು ಅನುದಾನ ಬಿಡುಗಡೆಗೆ ಶ್ರಮಿಸಿದ ಜನಪ್ರತಿನಿಧಿಗಳು, ಪಾಲಿಕೆ ಆಯುಕ್ತರು, ಪಾಲಿಕೆ ಮೇಯರ್, ಅಧಿಕಾರಿಗಳ ಕಾರ್ಯ ಶ್ಲಾಘನೀಯ.
ಇದೀಗ ಬಿಡುಗಡೆಗೊಂಡಿರುವುದು, ಒಂದು ಭಾಗದಷ್ಟು ಅನುದಾನ ಮಾತ್ರ. ಉಳಿದ ಭಾಗದ ಅನುದಾನವನ್ನು ಕ್ಲಪ್ತ ಸಮಯದಲ್ಲಿ ಹಂತಹಂತವಾಗಿ ಬಿಡುಗಡೆಗೊಳಿಸಲು ಪಾಲಿಕೆ ಕ್ರಮಕೈಗೊಳ್ಳಬೇಕಾಗಿದೆ.