ಮಂಗಳೂರು, ಅ. 06 (DaijiworldNews/SM): ಕೊರೋನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ತಪ್ಪಿದ್ದಲ್ಲಿ ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. ಈ ಆದೇಶ ದ.ಕ. ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಬರುತ್ತಿದ್ದು, ಮಾಸ್ಕ ಇಲ್ಲದವರು, ಸಾಮಾಜಿಕ ಅಂತರ ಪಾಲಿಸದವರ ವಿರುದ್ಧ ಕ್ರಮ ತೀವ್ರವಾಗಿದೆ.

ದ.ಕ. ಜಿಲ್ಲೆಯೊಂದರಲ್ಲೇ ಇಲ್ಲಿಯ ತನಕ ಒಟ್ಟು 5345 ಪ್ರಕರಣಗಳು ದಾಖಲಾಗಿವೆ. ಇವರಿಂದ ಒಟ್ಟು 6,58,385 ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಒಂದು ಹಂತದಲ್ಲಿ ಇದು ಎಚ್ಚರಿಕೆಯಾಗಿದೆ. ಮಾಸ್ಕ್ ಧರಿಸದವರು, ಸಾಮಾಜಿಕ ಅಂತರ ಪಾಲಿಸದವರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವ ಅಗತ್ಯತೆಯ ಬಗ್ಗೆ ಎಚ್ಚರಿಕೆ ನೀಡುವುದಾಗಿದೆ.
ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರ ಅನಿವಾರ್ಯವೆನಿಸಿದೆ. ಅಲ್ಲದೆ, ಸ್ಯಾನಿಟೈಸರ್ ಬಳಕೆ ಕೂಡ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ತನ್ನ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ಸೂಚಿಸಿದೆ. ಅದರಂತೆ ನಗರ ಪ್ರದೇಶಗಳಲ್ಲಿ ಒಂದು ಸಾವಿರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಐನೂರು ರೂಪಾಯಿ ದಂಡ ವಸೂಲಿ ಮಾಡಲಾಗುತ್ತಿದೆ.