ಉಡುಪಿ, ಅ. 06 (DaijiworldNews/SM): ಆಸ್ತಿಯ ಆಸೆಗಾಗಿ ಮೊಮ್ಮಗಳೊಬ್ಬಳು ತನ್ನ ಅಜ್ಜಿ ಮತ್ತು ತಂದೆಯನ್ನು ಯಾಮಾರಿಸಿ ಸುಮಾರು 2 ಎಕರೆ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡ ಪ್ರಕರಣ ಉಡುಪಿಯ ಸಾಂತೂರು ಎಂಬಲ್ಲಿ ಬೆಳಕಿಗೆ ಬಂದಿದೆ.


ಸಂತ್ರಸ್ತ ಕುಟುಂಬ ಇದೀಗ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ವೇದಿಕೆಯ ಮೊರೆ ಹೋಗಿದೆ. ಪ್ರಕರಣದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಮಾನವ ಹಕ್ಕುಗಳ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಡಾ. ರವೀಂದ್ರನಾಥ ಶ್ಯಾನೋಭಾಗ್ "ಸಾಂತೂರು ಗ್ರಾಮದ 84 ವರ್ಷದ ಸೆಲೆಸ್ತಿನ್ ಎಂಬವರು ತಮ್ಮ ಸ್ವಂತ ದುಡಿಮೆಯಿಂದ ಸುಮಾರು 2 ಎಕರೆಯಷ್ಟು ಜಮೀನನ್ನು ಖರೀದಿಸಿದ್ದರು. ಇದರಲ್ಲಿ ತನ್ನ 4 ಮಂದಿ ಮಕ್ಕಳಿಗೂ ಸಮಪಾಲು ಮಾಡಿ ವೀಲುನಾಮೆಯನ್ನು ಕೂಡಾ ಮಾಡಿದ್ದರು.
ಆದರೆ ಸೆಲೆಸ್ತಿನ್ ಇವರ ಮೊಮ್ಮಗಳಲ್ಲಿ ಒಬ್ಬಾಕೆಯಾದ ರೋಶನಿ ಎಂಬವಳು ಕೆಲವು ತಿಂಗಳ ಹಿಂದೆ ತನ್ನ ಅಜ್ಜಿ ಮತ್ತು ತಂದೆ ರೊನಾಲ್ಡ್ ಅವರನ್ನು ಮುಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆದುಕೊಂಡು ಹೋಗಿ ಜಾಗದ ಮೇಲೆ ಕೃಷಿ ಯೋಜನೆಯ ಅಡಿಯಲ್ಲಿ ಸಾಲ ತೆಗೆಸಿಕೊಡುತ್ತೇನೆ ಎಂದು ಹೇಳಿ ಮೋಸದಿಂದ ಸಹಿ ಮಾಡಿಸಿಕೊಂಡಿದ್ದಾಳೆ. ಮೊದಲಿಗೆ ಆಸ್ತಿಯನ್ನು ತನ್ನ ತಂದೆ ರೊನಾಲ್ಡ್ ಅವರ ಹೆಸರಿಗೆ ವರ್ಗಾಯಿಸಿ ತದನಂತರ ಅವರ ಹೆಸರಿಂದ ತನ್ನ ಹೆಸರಿಗೆ ಖಾತೆ ವರ್ಗಾವಣೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.