ಮಂಗಳೂರು, ಅ.07 (DaijiworldNews/HR): ಆಂಧ್ರ ಪ್ರದೇಶ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೂರಾರು ಕೋಟಿ ರೂಪಾಯಿಗಳಿಗೆ ಹರಿದುಬಂದ ಹಣವನ್ನು ವಂಚಿಸಲು ಯತ್ನಿಸಿದ್ದಾರೆ ಎಂಬ ಆರೋಪದ ಮೇಲೆ ಆಂಧ್ರಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಸಿಬ್ಬಂದಿ ದಕ್ಷಿಣ ಕನ್ನಡ ಜಿಲ್ಲೆಯ ಆರು ಮಂದಿಯನ್ನು ಬಂಧಿಸಿದ್ದಾರೆ.

ಮೂಡುಬಿದ್ರಿಯ ಯೋಗೀಶ್ ಆಚಾರ್ಯ (40), ಕಾಂತವರ ಮೂಲದ ಉದಯ್ ಶೆಟ್ಟಿ (35), ಮಂಗಳೂರಿನ ಬ್ರಿಜೆಶ್ ರೈ (35), ಬೆಳ್ತಂಗಡಿಯ ಗಂಗಾಧರ್ ಸುವರ್ಣ (45) ಮತ್ತು ಇತರ ಇಬ್ಬರನ್ನು ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 117 ಕೋಟಿ ರೂ.ಗಳ ಮೊತ್ತವನ್ನು ನಕಲಿ ಸಹಿಯೊಂದಿಗೆ ವಂಚಿಸಲು ಪ್ರಯತ್ನಿಸಲಾಗಿದೆ ಎಂದು ತಿಳಿದುಬಂದಿದೆ. ಈ ಪೈಕಿ ದಕ್ಷಿಣ ಕನ್ನಡ ಮೂಲದ ಆರು ಜನರು 52 ಕೋಟಿ ರೂ.ಗಳನ್ನು ವಂಚಿಸುವ ಪ್ರಯತ್ನದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಆಂಧ್ರ ಪ್ರದೇಶ ಕಂದಾಯ ವಿಭಾಗದ ಕಾರ್ಯದರ್ಶಿ ಮುರಳಿಕೃಷ್ಣ ರಾವ್ ಪಿ ಅವರು ಈ ವಂಚನೆಯ ಬಗ್ಗೆ ದೂರು ನೀಡಿದ್ದು, ತುಲ್ಲೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ತನಿಖೆ ಕೈಗೊಂಡಿದ್ದರು.
ಚೆಕ್ಗಳ ಪರಿಶೀಲನೆ ಮತ್ತು ಮಂಜೂರು ಮಾಡಿದ ಸಮಯದಲ್ಲಿ ಮೋಸ ಮಾಡಿದ್ದು ತಿಳಿದು ಬಂದಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ತನಿಖೆಗೆ ಆದೇಶಿಸಿದ್ದು, ಒಟ್ಟು 117 ಕೋಟಿ ರೂ.ಗಳನ್ನು ವಂಚಿಸಲಾಗಿದೆ ಎಂದು ಬೆಳಕಿಗೆ ಬಂದಿದೆ.
ಮೂಡುಬಿದ್ರಿಯ ಯೋಗೀಶ್ ಆಚಾರ್ಯ ಎನ್ಕ್ಯಾಶ್ಮೆಂಟ್ಗಾಗಿ 52 ಕೋಟಿ ರೂ.ಗಳ ಚೆಕ್ ನೀಡಿದಾಗ ಬ್ಯಾಂಕ್ ಅಧಿಕಾರಿಗೆ ಅನುಮಾನ ಬಂತು. ಅವರು ಎಪಿ ಸಿಎಂ ರಿಲೀಫ್ ಫಂಡ್ ಅಧಿಕಾರಿಗಳನ್ನು ಸಂಪರ್ಕಿಸಿದರು. ನಂತರ ನಕಲಿ ಸಹಿ ಹೊಂದಿರುವ ಚೆಕ್ ಅನ್ನು ಬಳಸಲಾಗಿದೆ ಎಂದು ಕಂಡುಬಂದಿದೆ. ಚೆಕ್ ಪಾವತಿಯನ್ನು ತಡೆಹಿಡಿಯಲಾಯಿತು, ನಂತರ ಆಂಧ್ರ ಪೊಲೀಸರು ಮೂಡುಬಿದ್ರಿಗೆ ಬಂದು ಯೋಗೀಶ್ ಆಚಾರ್ಯ ಮತ್ತು ಉದಯ್ ಶೆಟ್ಟಿ ಅವರನ್ನು ಬಂಧಿಸಿದರು. ಇಬ್ಬರನ್ನು ಮೂಡುಬಿದ್ರಿ ನ್ಯಾಯಾಲಯದಲ್ಲಿ ಹಾಜರುಪಡಿಸಿ ನಂತರ ವಾರಂಟ್ನ ಆಧಾರದ ಮೇಲೆ ಆಂಧ್ರಕ್ಕೆ ಕರೆದೊಯ್ಯಲಾಯಿತು. ಯೋಗೀಶ್ ಮತ್ತು ಉದಯ್ ಇಬ್ಬರೂ ಇತ್ತೀಚಿನವರೆಗೂ ಮುಂಬೈನಲ್ಲಿದ್ದರು ಮತ್ತು ತಮ್ಮ ಊರಿಗೆ ಮರಳಿದ್ದರು ಎಂದು ಹೇಳಲಾಗಿದೆ.