ಸುರತ್ಕಲ್, ಅ.07 (DaijiworldNews/HR): ಜಿಲ್ಲೆಯಲ್ಲಿ ಹಾಗೂ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗೋ ಸಾಗಾಟ ಹಾಗೂ ಅಕ್ರಮ ಕಸಾಯಿ ಖಾನೆ ವಿರುದ್ಧ ಪೊಲೀಸರು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಡಾ.ಭರತ್ ಶೆಟ್ಟಿ.ವೈ ಹೇಳಿದ್ದಾರೆ.

ಮಾರಾಕಾಯುಧಗಳನ್ನು ತೋರಿಸಿ ಹಟ್ಟಿಯಿಂದ ದನ ಕಳವು, ರಸ್ತೆಬದಿಯಲ್ಲಿ ಮೇಯಲು ಬಿಟ್ಟ ದನಗಳನ್ನು ವಾಹನಗಳಲ್ಲಿ ತುಂಬಿಸಿ ಅಕ್ರಮ ಕಸಾಯಿ ಖಾನೆಗಳಿಗೆ ಮಾರುವುದು, ಬೀಡಾಡಿ ದನಗಳನ್ನು ಹಿಂಸಿಸಿ ಕೊಂಡೊಯ್ಯುವುದು, ಮತ್ತಿತರ ಘಟನೆಗಳು ಪದೇ ಪದೇ ನಡೆಯುತ್ತಿದೆ. ಹೈನುಗಾರಿಕೆಯನ್ನು ನಂಬಿ ಹಲವಾರು ಕೃಷಿಕರು ಈ ಭಾಗದಲ್ಲಿ ಜೀವನ ನಡೆಸುತ್ತಿದ್ದು ಅವರ ದನವನ್ನೇ ಕದ್ದೊಯ್ಯುವ ಮೂಲಕ ಅವರ ದಿನದ ತುತ್ತಿನ ಚೀಲಕ್ಕೂ ಕನ್ನ ಹಾಕುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ನಿರ್ಲಕ್ಷ್ಯವಹಿಸದೆ ಕಾನೂನು ಕ್ರಮವನ್ನು ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಬಿಜೆಪಿ ಪಕ್ಷದ ಗೋ ಸಂರಕ್ಷಣಾ ಸಂಘಟನೆಗಳು, ಸಂಘಟನೆಯ ಕಾರ್ಯಕರ್ತರು ಬೀದಿಗೆ ಇಳಿದು ಹೋರಾಟ ಮಾಡುವುದು ಅನಿವಾರ್ಯವಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.