ಸುಳ್ಯ, ಅ. 07 (DaijiworldNews/MB) : ಕೊರೊನಾ ಲಾಕ್ಡೌನ್ ಬಳಿಕ ಇತ್ತೀಚೆಗೆ ಆನ್ಲೈನ್ ತರಗತಿಗಳು ಆರಂಭವಾಗಿದೆ. ಆದರೆ ಹಲವು ವಿದ್ಯಾರ್ಥಿಗಳು ನೆಟ್ವರ್ಕ್ ಸಮಸ್ಯೆಯಿಂದಾಗಿ ಪರದಾಡುವಂತಾಗಿದೆ. ಸುಳ್ಯದ ಬಾಳುಗೋಡು ಎಂಬ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದು ಈ ನೆಟ್ವರ್ಕ್ ಸಮಸ್ಯೆಯಿಂದಾಗಿ ಬೇರೆ ದಾರಿಯಿಲ್ಲದೆ ನೆಟ್ವರ್ಕ್ ಸಿಗುವ ಹತ್ತಿರದ ಗುಡ್ಡಗಾಡುಗಳಿಗೆ ಹೋಗಿ, ಮರವನ್ನು ಹತ್ತಿ ಕುಳಿತು ಆನ್ಲೈನ್ ತರಗತಿಗಳಿಗೆ ಹಾಜರಾಗಬೇಕಾದ ಪರಿಸ್ಥಿತಿ ಎದುರಾಗಿದೆ.

ಈ ಗ್ರಾಮದಲ್ಲಿ ಯಾವುದೇ ಮೊಬೈಲ್ ಕಂಪನಿಗಳಿಗೆ ನೆಟ್ವರ್ಕ್ ಸಿಗುವುದಿಲ್ಲ. ಈ ಕಾರಣದಿಂದಾಗಿ ಈಗಾಗಲೇ ಈ ಗ್ರಾಮದ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಡುವೆ ಈಗ ಆನ್ಲೈನ್ ತರಗತಿಗಳಿಗೆ ಹಾಜರಾಗುವಂತೆ ಸೂಚನೆ ಇರುವ ಹಿನ್ನೆಲೆ ವಿದ್ಯಾರ್ಥಿಗಳು ನೆಟ್ವರ್ಕ್ ಸಿಗುವ ಜಾಗ ಹುಡುಕುತ್ತಾ ಅಲೆದಾಡಬೇಕಾಗಿದೆ. ಕೊನೆಗೆ ಬೆಟ್ಟಗಳ ಮೇಲೆ ಕುಳಿತು ಆನ್ಲೈನ್ ಪಾಠ ಕೇಳುವ ಪರಿಸ್ಥಿತಿ ಉಂಟಾಗಿದೆ.
ಬೆಟ್ಟುಮಕ್ಕಿ ಪ್ರದೇಶದಲ್ಲಿ ಟೆಂಟ್ ಹಾಕಿದ್ದಾರೆ. ಹುಡುಗಿಯರು ಸೇರಿದಂತೆ ಇನ್ನೂ ಕೆಲವರು ಕಾಡುಗಳನ್ನು ನೆಟ್ವರ್ಕ್ ಹುಡುಕುತ್ತಾ ಮರಗಳನ್ನು ಏರುತ್ತಾರೆ. ಬಾಳುಗೋಡು ಪುಷ್ಪಗಿರಿ ಬೆಟ್ಟದ ಬುಡದಲ್ಲಿರುವ ಒಂದು ಹಳ್ಳಿಯಾಗಿದ್ದು, ಕಾಡು ಆನೆಗಳು, ಚಿರತೆಗಳು ಮತ್ತು ಇತರ ಕಾಡು ಪ್ರಾಣಿಗಳು ಆಗಾಗ್ಗೆ ತಿರುಗಾಡುತ್ತದೆ. ಹೀಗಾಗಿ ಈ ಗ್ರಾಮದವರು ತಮ್ಮ ಮಕ್ಕಳು ಈ ಗುಡ್ಡ ಪ್ರದೇಶದಲ್ಲಿ ಆನ್ಲೈನ್ ತರಗತಿಗೆ ಹಾಜರಾಗವುದರಿಂದ ಆತಂಕಕ್ಕೆ ಒಳಗಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗ್ರಾಮಸ್ಥ ಹೊನ್ನಪ್ಪ ಪೊಯ್ಯೆಮಜಲು, ತುರ್ತು ಸಂದರ್ಭಗಳಲ್ಲಿ ಸಹ ನಾವು ಇತರರ ಸಂಪರ್ಕ ಮಾಡಲು ಸಾಧ್ಯವಾಗುವುದಿಲ್ಲ. ಈಗ ನಮ್ಮ ಮಕ್ಕಳೂ ಸಹ ಸಮಸ್ಯೆಗೆ ಒಳಗಾಗಿದ್ದಾರೆ. ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಿಸುವ ಬಗ್ಗೆ ಜನಪ್ರತಿನಿಧಿಗಳಿಗೆ ಪದೇ ಪದೇ ಮನವಿ ಮಾಡಿದ್ದರು ಯಾವುದೇ ಪ್ರತಿಫಲವಿಲ್ಲ ಎಂದು ಹೇಳಿದ್ದಾರೆ. ಇನ್ನು ಗ್ರಾಮಸ್ಥರು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹೇಳಲಾಗಿದೆ.