ಮಂಗಳೂರು, ಅ. 07 (DaijiworldNews/SM): ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಬುಧವಾರ 447 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ 25,276ಕ್ಕೆ ಏರಿಕೆಯಾದಂತಾಗಿದೆ.

ಬುಧವಾರ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ 7 ಮಂದಿ ಮೃತಪಟ್ಟಿದ್ದು, ಇದರೊಂದಿಗೆ ಮೃತರ ಸಂಖ್ಯೆ ಜಿಲ್ಲೆಯಲ್ಲಿ 588ಕ್ಕೆ ತಲುಪಿದೆ. ಈ ನಡುವೆ ಗುಣಮುಖರಾದವರ ಸಂಖ್ಯೆ ಉತ್ತಮವಾಗಿದ್ದು, ಬುಧವಾರ ಒಂದೇ ದಿನ 1,214 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಇಲ್ಲಿಯ ತನಕ ಗುಣಮುಖರಾದವರ ಸಂಖ್ಯೆ 20 ಸಾವಿರಕ್ಕೇರಿದೆ.
ಇನ್ನು ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಇಲ್ಲಿಯ ತನಕ ಒಟ್ಟು 1,80,010 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆ ಪೈಕಿ 1,54,734 ಮಂದಿಯ ವರದಿ ನೆಗೆಟಿವ್ ಮತ್ತು 25,276 ಮಂದಿಯ ವರದಿ ಪಾಸಿಟಿವ್ ಬಂದಿದೆ. ಪ್ರಸ್ತುತ ದ.ಕ. ಜಿಲ್ಲೆಯಲ್ಲಿ 4,688 ಸಕ್ರಿಯ ಪ್ರಕರಣಗಳಿವೆ.
ಉಡುಪಿ ಜಿಲ್ಲೆಯಲ್ಲಿ ಬುಧವಾರ ಮತ್ತೆ 207 ಮಂದಿಯಲ್ಲಿ ಸೋಂಕು:
ಇನ್ನು ಉಡುಪಿ ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 207 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 18,569ಕ್ಕೆ ತಲುಪಿದೆ. ಬುಧವಾರದಂದು ಪಾಸಿಟಿವ್ ಬಂದವರಲ್ಲಿ 10 ಮಂದಿ 10 ವರ್ಷದೊಳಗಿನ ಬಾಲಕರಾಗಿದ್ದಾರೆ. 114 ಮಂದಿ ಪುರುಷರಲ್ಲಿ ಹಾಗೂ ಎಂಟು ಮಂದಿ ಬಾಲಕಿಯರು ಸೇರಿದಂತೆ 93 ಮಂದಿ ಮಹಿಳೆಯರಲ್ಲಿ ಇಂದು ಸೋಂಕು ಪತ್ತೆಯಾಗಿದೆ. 60 ವರ್ಷ ಮೇಲಿನ 34 ಮಂದಿ ಸೋಂಕಿತರಿದ್ದಾರೆ.
185 ಮಂದಿ ಸೋಂಕಿನಿಂದ ಗುಣಮುಖರಾಗಿ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 16,313ಕ್ಕೆ ತಲುಪಿದೆ. ಜಿಲ್ಲೆಯಲ್ಲಿ ಸದ್ಯ 2095 ಸಕ್ರೀಯ ಪ್ರಕರಣಗಳಿವೆ. ಬುಧವಾರ ಜಿಲ್ಲೆಯಲ್ಲಿ ಇಬ್ಬರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 162ಕ್ಕೆ ಏರಿಕೆಯಾಗಿದೆ.