ಉಡುಪಿ, ಅ. 08 (DaijiworldNews/MB) : ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಉಡುಪಿಯ ಸರಳಬೆಟ್ಟುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ 460 ಮನೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಮನೆ ಪಡೆಯುವ ಸಂಬಂಧ ಈಗಾಗಲೇ ಅರ್ಜಿ ಸಲ್ಲಿಸಿ ಪೂರ್ಣ ಕಂತು ಪಾವತಿಸಿದ ಫಲಾನುಭವಿಗಳೊಂದಿಗೆ ಬುಧವಾರ ಶಾಸಕ ಕೆ. ರಘುಪತಿ ಭಟ್ ನಗರ ಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಸಭೆ ನಡೆಸಿದರು.


ಒಂದು ಮನೆಗೆ ತಗಲುವ ವೆಚ್ಚದಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಹಾಗೂ ನಗರಸಭೆ ನೀಡುವ ಸಹಾಯಧನ ಹೊರತುಪಡಿಸಿ ಹೆಚ್ಚುವರಿ ಹಣವನ್ನು ಬ್ಯಾಂಕ್ ಆಫ್ ಬರೋಡ ವತಿಯಿಂದ ಸಾಲ ನೀಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಫಲಾನುಭವಿಗಳಿಗೆ ಈ ಸಾಲದ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಫಲಾನುಭವಿಗಳಿಂದ ಕಾರ್ಮಿಕ ಇಲಾಖೆಯ ಗುರುತಿನ ಚೀಟಿ ಪಡೆದು ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಮಂಡಳಿಯಿಂದ ರೂ. 2 ಲಕ್ಷ ಬಡ್ಡಿ ರಹಿತ ಸಾಲ ಒದಗಿಸುವ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಉಡುಪಿಯ ಸರಳಬೆಟ್ಟುವಿನಲ್ಲಿ 860 ಮನೆಗಳನ್ನು ನಿರ್ಮಿಸುವ ಗುರಿ ಇದ್ದು ಪ್ರಥಮ ಹಂತದಲ್ಲಿ 460 ಮನೆಗಳನ್ನು ಪೂರ್ಣಗೊಳಿಸಿ ಪ್ರಥಮವಾಗಿ ಬಂದ ಅರ್ಜಿಗಳ ಅನುಸಾರ 460 ಅರ್ಜಿಗಳು ಪೂರ್ಣಗೊಂಡ ಮೇಲೆ ಲಾಟರಿ ಎತ್ತುವ ಮೂಲಕ ಫಲಾನುಭವಿಗಳಿಗೆ ಮನೆಯನ್ನು ಹಂಚಿಕೆ ಮಾಡುವ ವಿಷಯದ ಬಗ್ಗೆ ಸಭೆಯ ಗಮನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಅಭಿಯಂತರರಾದ ಎಚ್. ಮಂಜು, ನಗರಸಭಾ ಪೌರಾಯುಕ್ತರಾದ ಆನಂದ್ ಸಿ ಕಲ್ಲೋಲಿಕರ್ ಮತ್ತು ನಗರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.