ಸುಳ್ಯ, ಅ. 08 (DaijiworldNews/MB) : ನಗರದ ಶಾಂತಿನಗರದಲ್ಲಿ ಗುರುವಾರ ಬೆಳ್ಳಂಬೆಳ್ಳಗ್ಗೆ ಸುಮಾರು 7.15 ಕ್ಕೆ ಅಪರಿಚಿತ ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.




ಹತ್ಯೆಯಾದ ವ್ಯಕ್ತಿಯನ್ನು ಶಾಂತಿನಗರ ನಿವಾಸಿ ಸಂಪತ್ ಎಂದು ಗುರುತಿಸಲಾಗಿದೆ. ಇನ್ನು ಸಂಪತ್ ವರ್ಷದ ಹಿಂದೆ ನಡೆದ ಸಂಪಾಜೆ ಕಳಗಿ ಬಾಲಚಂದ್ರರ ಕೊಲೆ ಪ್ರಕರಣದ ಆರೋಪಿ ಎಂದು ತಿಳಿದು ಬಂದಿದೆ.
ಬೆಳ್ಳಂಬೆಳಗ್ಗೆ ಕಾರಿನಲ್ಲಿ ಬಂದ ಅಪರಿಚಿತ ತಂಡವೊಂದು ಸಂಪತ್ಗೆ ಗುಂಡಿಕ್ಕಿದ್ದು ಗಾಯಾಳುವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಇದೀಗ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸಂಪತ್ ಮನೆಯಿಂದ ಬೆಳಿಗ್ಗೆ ಸಮಯ ಸುಮಾರು 7.15ಗಂಟೆಗೆ ಹೊರಟು ಮನೆಯ ಪಕ್ಕದಲ್ಲಿದ್ದ ಕಾರಿನಲ್ಲಿ ಕುಳಿತಾಗ ಸುಮಾರು ನಾಲ್ಕು ಜನ ದುಷ್ಕರ್ಮಿಗಳ ತಂಡ ಸಂಪತ್ ಕುಳಿತಿದ್ದ ಕಾರಿನ ಗಾಜನ್ನು ಒಡೆದು ತಲವಾರು, ಚೂರಿ ಮತ್ತು ಕೋವಿಯಿಂದ ದಾಳಿ ನಡೆಸಿದೆ. ಈ ವೇಳೆ ಸಂಪತ್ ತಪ್ಪಿಸುವ ಪ್ರಯತ್ನದಲ್ಲಿ ಪಕ್ಕದಲ್ಲಿರುವ ಮನೆಯೊಂದಕ್ಕೆ ಓಡಿಹೋಗಿದ್ದು ಆತನನ್ನು ಬೆನ್ನಟ್ಟಿ ಬಂದ ದುಷ್ಕರ್ಮಿಗಳ ತಂಡ ಮನೆಯೊಳಗೆ ಪ್ರವೇಶಿಸಿ ಸಂಪತ್ ನನ್ನು ತಲವಾರು ಮತ್ತು ಚೂರಿಯಿಂದ ಕಡಿದು ಕೋವಿಯಿಂದ ಗುಂಡು ಹಾರಿಸಿದ್ದಾರೆ. ಈ ವೇಳೆ ತಡೆಯಲು ಬಂದ ಸ್ಥಳೀಯರಾದ ವ್ಯಕ್ತಿಯೊಬ್ಬರಿಗೂ ತಲವಾರಿನಿಂದ ಹಲ್ಲೆ ನಡೆಸಿರುತ್ತಾರೆ. ಈ ವೇಳೆ ಶಬ್ದ ಕೇಳಿ ಸ್ಥಳೀಯರು ಘಟನಾ ಸ್ಥಳಕ್ಕೆ ಬರುತ್ತಿರುವುದನ್ನು ಕಂಡ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ತೀವ್ರ ಗಾಯಗೊಂಡಿದ್ದ ಸಂಪತ್ ಕುಮಾರ್ ಸ್ಥಳದಲ್ಲೆ ಮೃತಪಟ್ಟಿರುವುದಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಪೂರ್ವದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಿರುವುದಾಗಿ ಸಂಶಯ ವ್ಯಕ್ತಪಡಿಸಿದ್ದಾರೆ.