ಮಂಗಳೂರು, ಮೇ 17: ಬಲ್ಮಠದ ಅಮ್ನೇಶಿಯಾ ಪಬ್ ದಾಳಿಗೆ ಸಂಬಂಧಿಸಿದಂತೆ ಸ್ಥಳೀಯ ಮ್ಯಾಜಿಸ್ಟೇಟ್ ನ್ಯಾಯಾಲಯದಿಂದ ಪ್ರಕರಣ ಖುಲಾಸೆಗೊಂಡು ಹೊರಬಂದಿದ್ದ 26 ಮಂದಿ ಆರೋಪಿಗಳ ವಿರುದ್ಧ ಇದೀಗ ರಾಜ್ಯ ಸರಕಾರ ಕ್ರಿಮಿನಲ್ ಮೊಕದ್ದಮೆ ಅಪೀಲು ದಾಖಲಿಸಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಪ್ರಕಟಿಸಿದ ಏಪ್ರಿಲ್ 28ರ ಸೂಚನೆಯನ್ವಯ ಮೇ 5ರಂದು ಸೆಕೆಂಡ್ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಫಸ್ಟ್ ಕ್ಲಾಸ್ ನ್ಯಾಯಾಲಯ ಕ್ರಿಮಿನಲ್ ಪ್ರೊಸೀಜರ್ ಪ್ರಕಾರ ಪ್ರಿನ್ಸಿಪಾಲ್ ಡಿಸ್ಟ್ರಿಕ್ಟ್ ಅಂಡ್ ಸೆಷನ್ಸ್ ನ್ಯಾಯಾಲಯದ ಮುಂದೆ ಪ್ರಕರಣ ದಾಖಲಿಸಿದೆ. ಪ್ರಕರಣವನ್ನು ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದ್ದು, ಖುಲಾಸೆಗೊಂಡಿದ್ದ ಎಲ್ಲಾ 26 ಆರೋಪಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಈ ಹಿಂದೆ ನಡೆದ ವಿಚಾರಣೆಯಲ್ಲಿ ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದ್ದರೂ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಶ್ರೀ ರಾಮ ಸೇನೆಯ ಸ್ಥಾಪಕಾಧ್ಯಕ್ಷ ಪ್ರಮೋದ್ ಮುತಾಯಿಕ್ ಸೇರಿದಂತೆ 26 ಮಂದಿಯನ್ನು ನಿರ್ದೋಷಿಗಳೆಂದು ತೀರ್ಪು ನೀಡಿ ಬಿಡುಗಡೆ ಮಾಡಲಾಗಿತ್ತು.