ಉಡುಪಿ, ಅ. 08(DaijiworldNews/PY): ಹಿಂದೂ ಹಬ್ಬಗಳು ಪ್ರಾರಂಭವಾಗುತ್ತಿದ್ದಂತೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ದೇವಾಲಯಗಳಲ್ಲಿ ಭಾರಿ ಜನಸಂದಣಿ ಕಾಣುವ ಕಾರಣ, ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಯಾವ ದೇವಾಲಯಗಳು ಪ್ರತಿದಿನ ಅನ್ನದಾನ ಮಾಡುತ್ತಿದ್ದವೋ, ಆ ದೇವಾಲಯದಲ್ಲಿ ಅನ್ನಸಂತರ್ಪಣೆ ಮುಂದುವರೆಸಬಹುದು. ಆದರೆ, ಯಾವುದೇ ದೇವಾಲಯಗಳು ಇದನ್ನು ಹೊಸತಾಗಿ ಆರಂಭಿಸಬಾರದು ಎಂದು ಸರ್ಕಾರ ತಿಳಿಸಿದೆ.

ಅ.7ರ ಬುಧವಾರ ಉಪ ಆಯುಕ್ತರ ಕಚೇರಿಯಲ್ಲಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಹಬ್ಬಗಳ ಸಂದರ್ಭ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.
ಹೆಚ್ಚುತ್ತಿರುವ ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೇವಾಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ ಅವರು, ಭಕ್ತಾದಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರವೇಶ ದ್ವಾರದ ಬಳಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಅನ್ನು ಕಡ್ಡಾಯವಾಗಿ ನೀಡಬೇಕು. ಭಕ್ತರ ಸಂಖ್ಯೆ ಹೆಚ್ಚಳವಾದ ಸಂದರ್ಭ ಪೊಲೀಸರ ನೆರವು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ದೇವಾಲಯದ ವಾರ್ಷಿಕ ಉತ್ಸವಗಳು, ಬ್ರಹ್ಮಕಲಶೋತ್ಸವ, ಪವಿತ್ರೋತ್ಸವ ಮತ್ತು ಇತರ ವಿಶೇಷ ಸಂದರ್ಭಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಸಂಪ್ರದಾಯಗಳಲ್ಲಿ ಅವುಗಳನ್ನು ಮುಂದೂಡಲು ಅವಕಾಶವಿಲ್ಲದಿದ್ದರೆ, ಇವುಗಳನ್ನು ಸಾಂಕೇತಿಕವಾಗಿ ಆಚರಿಸಲು ದೇವಾಲಯದ ತಂತ್ರಿ, ಪುರೋಹಿತರು ಮತ್ತು ಸಿಬ್ಬಂದಿಗೆ ಸಲಹೆ ನೀಡಿದರು.
ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಉಪ ವಿಭಾಗೀಯ ಅಧಿಕಾರಿಗಳಿಗೆ, ತಹಶೀಲ್ದಾರ್ ಗೆ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ಒಂದು ವೇಳೆ ನಿಯಮ ಉಲ್ಲಂಘನೆಯಾದಲ್ಲಿ ಕಾನೂನು ಕ್ರಮ ತೆಗದುಕೊಳ್ಳುವಂತೆ ಸೂಚನೆ ನೀಡಿದರು.
ಹೆಚ್ಚುವರಿ ಉಪ ಆಯುಕ್ತ ಸದಾಶಿವ ಪಭು ಮತ್ತು ಧಾರ್ಮಿಕ ದತ್ತಿ ವಿಭಾಗದ ಜಿಲ್ಲಾ ತಹಶೀಲ್ದಾರ್ ಉಪಸ್ಥಿತರಿದ್ದರು.