ಮಂಗಳೂರು, ಅ. 08 (DaijiworldNews/MB) : ಸ್ಮಾರ್ಟ್ ಸಿಟಿ ಯೋಜನೆಯಲ್ಲಿನ ಅಕ್ರಮಗಳ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಥವಾ ಲೋಕಾಯುಕ್ತ ತನಿಖೆ ನಡೆಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರು ಒತ್ತಾಯಿಸಿದ್ದಾರೆ.


ಅಕ್ಟೋಬರ್ 8 ರ ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಸ್ಮಾರ್ಟ್ ಸಿಟಿ ಯೋಜನೆಯ ಅಂದಾಜು ವೆಚ್ಚವು ಈ ಯೋಜನೆಯ ಈ ಹಿಂದಿನ ಅಂದಾಜು ವೆಚ್ಚಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯ ಅಂದಾಜು ವೆಚ್ಚ ಮತ್ತು ಡಿಪಿಆರ್ ಬಗ್ಗೆ ಸಾರ್ವಜನಿಕರಿಗೆ ಅನುಮಾನವಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದು ಈ ಬಗ್ಗೆ ಎಸಿಬಿ ಅಥವಾ ಲೋಕಾಯುಕ್ತರು ತನಿಖೆ ಮಾಡಬೇಕಾಗಿದೆ'' ಎಂದು ಹೇಳಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆ ಪ್ರಾರಂಭವಾದ ಎರಡು ವರ್ಷಗಳಾದರೂ ಯಾವುದೇ ಒಂದು ಯೋಜನೆಗಳು ಪೂರ್ಣಗೊಂಡಿಲ್ಲ ಎಂದು ದೂರಿದ ಅವರು, ಸಾರ್ವಜನಿಕ ಲೆಕ್ಕಪರಿಶೋಧನೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ. ''ಸ್ಮಾರ್ಟ್ ಸಿಟಿ ಯೋಜನೆ ಕೈಗೆತ್ತಿಕೊಂಡು ಎರಡು ವರ್ಷಗಳಾಗಿವೆ. ಕೈಗೆತ್ತಿಕೊಂಡು ಎರಡು ವರ್ಷಗಳಾಗಿವೆ. ಪೂರ್ಣಗೊಂಡ ಯೋಜನೆಗಳು ಮತ್ತು ಯೋಜನೆಗೆ ಇದುವರೆಗೆ ಖರ್ಚು ಮಾಡಿದ ವೆಚ್ಚಗಳ ಬಗ್ಗೆ ಚರ್ಚೆಯಾಗಬೇಕಿದೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು'' ಎಂದು ಆಗ್ರಹಿಸಿದ್ದಾರೆ.
"40 ಕೋಟಿ ರೂಪಾಯಿಗಳ ಮಹಾಕಾಳಿ ಪಡ್ಪುವಿನ ಅಭಿವೃದ್ಧಿ ಇನ್ನೂ ಬಾಕಿ ಉಳಿದಿದೆ, ಅದು ಇನ್ನೂ ಕೈಗೆತ್ತಿಕೊಂಡಿಲ್ಲ. ಭೂಸ್ವಾಧೀನವೂ ಕೂಡಾ ಇನ್ನಷ್ಟೇ ನಡೆಯಬೇಕಾಗಿದೆ'' ಎಂದು ಹೇಳಿದ್ದಾರೆ.
''ಆಶ್ರಯ ಯೋಜನೆಯಡಿ 916 ಕುಟುಂಬಗಳಿಗೆ ಮನೆಗಳನ್ನು ಹಸ್ತಾಂತರಿಸಲು ಏಕೆ ಸಾಧ್ಯವಿಲ್ಲ'' ಎಂದು ಐವನ್ ಡಿಸೋಜಾರವರು ಶಾಸಕ ವೇದವ್ಯಾಸ್ ಕಾಮತ್ ಅವರನ್ನು ಪ್ರಶ್ನಿಸಿದ್ದಾರೆ.
''ಎರಡು ವರ್ಷಗಳ ಹಿಂದೆ ಅಂದಿನ ಕಾಂಗ್ರೆಸ್ ಸರ್ಕಾರವು ಆಶ್ರಯ ಯೋಜನೆಯಡಿ 916 ಫಲಾನುಭವಿಗಳಿಗೆ ಮನೆಗಳನ್ನು ಮಂಜೂರು ಮಾಡಿದೆ. ಆದರೆ ಎರಡು ವರ್ಷಗಳ ನಂತರವೂ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿಲ್ಲ'' ಎಂದು ದೂರಿದ್ದಾರೆ.
"ಬಡವರಿಗೆ ಮನೆಗಳನ್ನು ಒದಗಿಸುವ ಬಗ್ಗೆ ಅವರಿಗೆ ಯಾವುದೇ ಕಾಳಜಿಯಿಲ್ಲ ಎಂಬುದು ಇದರಿಂದ ತಿಳಿದು ಬರುತ್ತದೆ. ಫಲಾನುಭವಿಗಳ ಸಂಪೂರ್ಣ ಪಟ್ಟಿಯನ್ನು ಪರಿಷ್ಕರಿಸಲು ಆದೇಶ ಹೊರಡಿಸಲಾಗಿದೆ. ಇದರ ಹಿಂದೆ ರಾಜಕೀಯ ಹುನ್ನಾರವಿರುವುದು ಕಂಡು ಬರುತ್ತದೆ'' ಎಂದು ಆರೋಪಿಸಿದ್ದಾರೆ.
ಇನ್ನು ಈ ಪತ್ರಿಕಾಗೋಷ್ಠಿಯಲ್ಲಿ ಎಂಸಿಸಿ ವಿರೋಧ ಪಕ್ಷದ ನಾಯಕ ಅಬ್ದುಲ್ ರವೂಫ್, ಕಾರ್ಪೋರೇಟರ್ ಶಶಿಧರ್ ಹೆಗ್ಡೆ ಮತ್ತು ಇತರರು ಉಪಸ್ಥಿತರಿದ್ದರು.