ಪುತ್ತೂರು, ಅ.08 (DaijiworldNews/PY): ಬೆಳ್ತಂಗಡಿ ತಾಲೂಕಿನ ನಿನ್ನಿಕಲ್ಲು ಎಂಬಲ್ಲಿ ಆ.29ರಂದು ಬಾಲಕಿಯ ಮೇಲಿನ ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಇಕ್ಬಾಲ್ ಸಾದಿಕ್ (27) ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೊಯ್ಯೂರು ಗ್ರಾಮದ ಮಲೆಬೆಟ್ಟು ನಿವಾಸಿ ಇಕ್ಬಾಲ್, ಮೇಕೆ ಮೇಯಿಸಲು ಬಂದಿದ್ದ ಬಾಲಕಿಯನ್ನು ತಡೆದಿದ್ದ ಎಂದು ವರದಿಯಾಗಿತ್ತು. ಬಳಿಕ ಆತ ಆಕೆಯ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದಾಗ, ಸ್ಥಳೀಯರು ಆತನನ್ನು ಹಿಡಿದು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಈತನ ವಿರುದ್ದ ಲೈಂಗಿಕ ದೌರ್ಜನ್ಯದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಜೈಲು ಪಾಲಾಗಿದ್ದ. ಬಳಿಕ ಈತ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈತ ಖಿನ್ನತೆಗೆ ಒಳಗಾಗಿದ್ದ ಎಂದು ವರದಿಯಾಗಿದೆ.
ಮಂಗಳವಾರದಂದು, ಮುಂಡೂರು ಬಳಿ ರಫೀಕ್ ಮತ್ತು ಇಕ್ಬಾಲ್ ಸಾದಿಕ್ ಮತ್ತು ಇತರರ ನಡುವೆ ಜಗಳವಾಗಿದ್ದು, ಈ ಬಗ್ಗೆ ರಫೀಕ್ ತನ್ನ ವಿರುದ್ದ ಪೊಲೀಸರಿಗೆ ದೂರು ಸಲ್ಲಿಸುತ್ತಾನೆ ಎಂದು ತುಂಬಾ ಹೆದರಿದ್ದ ಎಂದು ಹೇಳಲಾಗುತ್ತಿದೆ. ಹಾಗಾಗಿ ಇನ್ನೊಂದು ಪ್ರಕರಣವನ್ನು ಎದುರಿಸಲು ಭಯಗೊಂಡಿದ್ದಈತ ಅ.7ರ ಬುಧವಾರದಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.