ಮಂಗಳೂರು, ಅ. 09(DaijiworldNews/PY): ಕೊಣಾಜೆ ಠಾಣಾ ವ್ಯಾಪ್ತಿಯ ಬಾಳೆಪುಣಿಯ ಕಣಂತೂರಿನ ಬಾಳೆಪುಣಿಯ ಲ್ಲಿ ಸೆ. 25ರಂದು ನಡೆದ ಒಂಟಿ ಮಹಿಳೆಯೋರ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಸೆ. 25ರಂದು ಕುಸುಮಾ (50) ಎಂಬವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಇವರು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ನಡೆಸಿದ್ದಾರೆ ಎಂದು ಶಂಕಿಸಲಾಗಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲವು ಮಹತ್ವದ ಮಹಿತಿಗಳು ದೊರೆತಿದ್ದು, ಐದು ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇಲ್ಲಿ ಆರೋಪಿಗಳು ಪ್ರಕರಣವನ್ನು ತಿರುಚಲು ಕರ್ಟನ್ಗೆ ಬೆಂಕಿ ಹಾಕಿದ್ದಾರೆ. ಆದರೆ, ಮಹಿಳೆಯ ಮೈಮೇಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವ ಹಿನ್ನೆಲೆ ಕೃತ್ಯದ ಬಗ್ಗೆ ಶಂಕೆ ಹೆಚ್ಚಾಗಿತ್ತು. ಘಟನೆ ಬೆಳಕಿಗೆ ಬಂದ ಬಳಿಕ ಈ ಬಗ್ಗೆ ವಿವಿಧ ಆಯಾಮದಲ್ಲಿ ತನಿಖೆ ನಡೆದಿದ್ದು, ಆರಂಭದಲ್ಲಿ ಫರೊನಿಕ್ಸ್ ತಂಡಕ್ಕೆ ಕೂಡಾ ಈ ಬಗ್ಗೆ ಪತ್ತೆ ಹಚ್ಚಲು ಕಷ್ಟವಾಗಿತ್ತು. ಪ್ರಕರಣದ ತನಿಖೆ ಮಾಡಲು ಮೂರು ತಂಡಗಳನ್ನು ರಚಿಸಲಾಗಿದ್ದು, ತನಿಖೆಯಲ್ಲಿ ಮಹಿಳೆಯ ಮೇಲೆ ನಡೆದ ಹೀನ ಕೃತ್ಯದಲ್ಲಿ ಕತರ್ನಾಕ್ ಗ್ಯಾಂಗ್ವೊಂದರ ಕೈವಾಡವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.
ನೆಹರೂ ಮೈದಾನದಲ್ಲಿ ವಾಸವಿರುವ ತಂಡವೊಂದು ಈ ಕೃತ್ಯವನ್ನು ಎಸಗಿದ್ದಾರೆ ಎನ್ನಲಾಗಿದೆ. ಹಲವಾರು ಕಳ್ಳತನ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ ಐದು ಜನರ ತಂಡದಿಂದ ಈ ಕೃತ್ಯ ಎಸಗಲಾಗಿದೆ. ಈ ತಂಡವು ಈ ಪ್ರಕರಣದಲ್ಲಿ ಮಾತ್ರವಲ್ಲದೇ, ನೆಹರೂ ಮೈದಾನದಲ್ಲಿ ಮಲಗುವ ಇತರೆ ಭಿಕ್ಷುಕರ ಮೇಲೂ ಕೂಡಾ ಅತ್ಯಾಚಾರನಡೆಸುವ ಬಗ್ಗೆ ಪೊಲೀಸ್ ತನಿಖೆಯಿಂದ ಮಾಹಿತಿ ತಿಳಿದುಬಂದಿದೆ.
ಈ ಐದು ಜನರ ತಂಡದಲ್ಲಿದ್ದ ಓರ್ವನಿಗೆ ಕೊಣಾಜೆ ಠಾಣಾ ವ್ಯಾಪ್ತಿಯ ತೋಟದ ಮನೆಯಲ್ಲಿ ಒಂಟಿ ಮಹಿಳೆ ವಾಸ ಮಾಡುತ್ತಿದ್ದಾರೆ ಎನ್ನುವ ವಿಚಾರ ತಿಳಿದಿದ್ದು, ಹಾಗಾಗಿ ಈ ಐದು ಜನರ ತಂಡವು ಮಹಿಳೆಯ ಮನೆಯ ಮೇಲೆ ದಾಳಿ ಮಾಡಿ, ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಚಿನ್ನಾಭರಣ ಕಳವು ಮಾಡಿ, ಕರ್ಟನ್ಗೆ ಬೆಂಕಿ ಹಾಕಿ ಗ್ಯಾಸ್ ಸ್ಟವ್ ಒಡೆದ ಕಾರಣ ಮಹಿಳೆ ಮೃತಪಟ್ಟಿದ್ದಾರೆ ಎನ್ನುವ ರೀತಿಯಲ್ಲಿ ಕೃತ್ಯವನ್ನು ಬಿಂಬಿಸಿ ಹತ್ಯೆ ಮಾಡಿದ್ದಾರೆ.
ಈ ಘಟನೆಯ ಬಗ್ಗೆ ಸೂಕ್ತವಾದ ತನಿಖೆ ನಡೆಸಲು ಕೆಲವು ಸಂಘಟನೆಗಳು ಪೊಲೀಸರಲ್ಲಿ ಮನವಿ ಮಾಡಿದ್ದರು. ಆದರೆ, ಪೊಲೀಸರು ಈ ಬಗ್ಗೆ ಮಾಹಿತಿ ನೀಡಲು ತಡವರಿಸಿದ್ದರು. ಇದೀಗ ಪೊಲೀಸ್ ತನಿಖೆಯ ವೇಳೆ ಮಾಹಿತಿ ತಿಳಿದುಬಂದಿದೆ.