ಬೆಂಗಳೂರು, ಮೇ 18: ಬಿಎಸ್ ಯಡಿಯೂರಪ್ಪ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಕೆಲ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ.
ಮೊದಲಿಗೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಅವರನ್ನು ರಾಮನಗರದ ಎಸ್ಪಿಯಾಗಿ ವರ್ಗಾವಣೆ ಮಾಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ಪಿ ಅಣ್ಣಾಮಲೈ, 2016ರಲ್ಲಿ ಚಿಕ್ಕಮಗಳೂರು ಜಿ್ಲಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು. ಇದೀಗ ಅಣ್ಣಾಮಲೈ ಅವರನ್ನು ರಾಮನಗರದ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆಗಿದ್ದು, ಹಿರಿಯ ಐಎಎಸ್ ಅಧಿಕಾರಿ ಎಂ. ಲಕ್ಷ್ಮೀನಾರಾಯಣ್ ಅವರನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಅಣ್ಣಾಮಲೈ ಅವರು ಈ ಹಿಂದೆಯೇ ಬೆಂಗಳೂರಿಗೆ ವರ್ಗಾವಣೆ ಮಾಡಲು ಕೋರಿಕೊಂಡಿದ್ದರು. ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆ ಅವರನ್ನು ಸರಕಾರ ವರ್ಗಾವಣೆ ಮಾಡಿರಲಿಲ್ಲ. ಇದೀಗ ಚುನಾವಣೆ ಮುಗಿದ ಬೆನ್ನಲ್ಲೇ ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಹೇಳಲಾಗುತ್ತಿದೆ.