ಸುಳ್ಯ, ಅ. 09 (DaijiworldNews/SM): ಗುರುವಾರ ನಡೆದ ಶೂ್ಟೌಟ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಎರಡು ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿದೆ. ಬೆಳ್ಳಾರೆ ಉಪನಿರೀಕ್ಷಕ ಹಾಗೂ ಸುಳ್ಯ ಉಪನಿರೀಕ್ಷರ ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತನಿಖೆ ಚುರುಕುಗೊಂಡಿದೆ. ಕೊಲೆ ಕೃತ್ಯಕ್ಕೆ ಬಳಸಿದ ವಾಹನದ ಬಗ್ಗೆ ಪೊಲೀಸರಿಗೆ ಅಧಿಕೃತ ಮಾಹಿತಿ ದೊರೆತಿದೆ. ವಾಹನ ಪತ್ತೆಯಾಗಿದೆ ಎಂಬ ಮಾಹಿತಿ ಇದೆ. ಸಂಪಾಜೆ ಪರಿಸರದ ನಾಲ್ಕು ಜನರ ಮೇಲೆ ಅನುಮಾನ ಇದ್ದು ಅವರ ಮನೆಗಳಿಗೆ ತೆರಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕೊಲೆಯಾದ ಸಂಪತ್ ಯಾರು?
ಕೊಲೆಯಾದ ಸಂಪತ್ ಕುಮಾರ್ ಮೂಲತ ಸಂಪಾಜೆ ನಿವಾಸಿಯಾಗಿದ್ದು ಕೊಡಗು ಜಿಲ್ಲೆಯ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿ ಅವರ ಹತ್ಯೆಯಲ್ಲಿ ಕೊಲೆ ಆರೋಪಿಯಾಗಿದ್ದು ಇತ್ತಿಚೆಗೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ. ಸಂಪತ್ ಮರಳು ಸಾಗಾಟ ಹಾಗೂ ಇತರ ಅಕ್ರಮ ವ್ಯವಹಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಇದನ್ನು ಬಾಲಚಂದ್ರ ಕಳಗಿ ವಿರೋಧಿಸಿದ ಹಿನ್ನಲೆಯಲ್ಲಿ ಬಾಲಚಂದ್ರ ಕಳಗಿಯವರನ್ನು ಸುಪಾರಿ ನೀಡಿ ಕೊಲೆ ನಡೆಸಲಾಗಿತ್ತು ಎಂಬ ಅರೋಪ ಕೇಳಿ ಬಂದಿತ್ತು.