ವಿಟ್ಲ, ಅ. 09 (DaijiworldNews/SM): ಇಲ್ಲಿನ ಮೇಗಿನಪೇಟೆ ಎಂಬಲ್ಲಿ ಒಂಟಿ ಮಹಿಳೆಯಿರುವ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಕೈಕಾಲು ಕಟ್ಟಿ ಹಾಕಿ ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಯತ್ನ ಪ್ರಕರಣ ದಾಖಲಾಗಿದೆ. ಆದರೆ, ಘಟನೆಗೆ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.


ಕೇವಲ ಒಬ್ಬ ವ್ಯಕ್ತಿ ಈ ಕೃತ್ಯ ಎಸೆಗಿದ್ದಾನೆ ಎಂದು ತಿಳಿದು ಬಂದಿದೆ. ಮೇಗಿನಪೇಟೆ ನಿವಾಸಿ, ಒಂಟಿಯಾಗಿ ಜೀವನ ನಡೆಸುತ್ತಿರುವ ಲಲಿತಾ(45) ಅವರ ಮನೆಯ ಮುಂಬಾಗಿಲಿನ ಮೂಲಕ ನುಗ್ಗಿ ಮಹಿಳೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬಳಿಕ ಬಾಯಿಗೆ ಬಟ್ಟೆ ತುರುಕಿ, ಕೈ ಕಾಲು ಕಟ್ಟಿ ಹಾಕಿದ್ದಾರೆ. ಟೇಬಲ್ ಮೇಲಿದ್ದ ಬೀಗ ಮತ್ತು ಲಾಕ್ ಅನ್ನು ತೆಗೆದು ಮನೆ ಮುಂಭಾಗದ ಬಾಗಿಲಿಗೆ ಬೀಗ ಹಾಕಿ ದರೋಡೆಕೋರರು ಪರಾರಿಯಾಗಿದ್ದಾರೆ.
ಹಲ್ಲೆ ನಡೆಸಿದ ವ್ಯಕ್ತಿ ಯಾವುದೇ ವಸ್ತುಗಳನ್ನು ಕೂಡ ಮುಟ್ಟಲ್ಲ ಅನ್ನೋದು ಹಲವು ರೀತಿಯ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಚಿನ್ನದ ಸರ ಕುತ್ತಿಗೆಯಲ್ಲಿ ಹಾಗೆಯೇ ಉಳಿದುಕೊಂಡಿದೆ. ಇದು ದರೋಡೆ ಯತ್ನವೇ ಅಥವಾ ಹಳೆ ದ್ವೇಷದ ಕೃತ್ಯವೇ ಎಂಬುದು ಇನ್ನೂ ನಿಗೂಢವಾಗಿ ಉಳಿದುಕೊಂಡಿದೆ. ಪೊಲೀಸರ ತನಿಖೆಯ ಬಳಿಕವಷ್ಟೇ ಪ್ರಕರಣದ ಸತ್ಯಾಸತ್ಯತೆ ಹೊರಬೀಳಲಿದೆ. ಮಹಿಳೆಯ ಮುಖಕ್ಕೆ ಮತ್ತು ಎದೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ ನೇತೃತ್ವದ ತಂಡ ಭೇಟಿಕೊಟ್ಟು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೆತ್ತಿಕೊಂಡಿದ್ದಾರೆ.