ಕಾಸರಗೋಡು, ಅ. 09 (DaijiworldNews/SM): ಜಿಲ್ಲಾಧಿಕಾರಿಯವರ ನಿವಾಸದ ಸಮೀಪದ ಮನೆಯೊಂದರಿಂದ ಸುಮಾರು 885.56 ಕಿಲೋ ಶ್ರೀಗಂಧದ ಕೊರಡುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ.

ಬಂಧಿತನನ್ನು ನಾಯಮ್ಮರ ಮೂಲೆಯ ವಿ.ಅಬ್ದುಲ್ ಖಾದರ್(60) ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಳಾದ ಇಬ್ರಾಹಿಂ ಹರ್ಷಾದ್ ಹಾಗೂ ಲಾರಿ ಚಾಲಕ ತಲೆಮರೆಸಿಕೊಂಡಿದ್ದಾರೆ. ಇವರಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಕ್ಟೋಬರ್ 6ರಂದು 2.5 ಕೋಟಿ ರೂ. ಮೌಲ್ಯದ ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿಯವರ ವಸತಿ ಸಮೀಪ ಮುಂಜಾನೆ ಶಬ್ದ ಕೇಳಿ ಗಮನಿಸಿದ ಜಿಲ್ಲಾಧಿಕಾರಿಯವರ ವಾಹನ ಚಾಲಕ ಹಾಗೂ ಗನ್ ಮ್ಯಾನ್ ಈ ಬೃಹತ್ ಆಕ್ರಮ ಜಾಲವನ್ನು ಬಯಲಿಗೆ ತರಲು ಕಾರಣವಾಗಿತ್ತು. ಇವರು ನೀಡಿದ ಮಾಹಿತಿಯಂತೆ ಬಳಿಕ ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬುರವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದರು.
ಸಿಮೆಂಟ್ ಸಾಗಾಟದ ಲಾರಿಯಲ್ಲಿ ಪ್ರತ್ಯೇಕ ಕ್ಯಾಬಿನ್ ತಯಾರಿಸಿ ಅದರಲ್ಲಿ ಶ್ರೀಗಂಧದ ಕೊರಡನ್ನು ಬಚ್ಚಿಟ್ಟು ಆಂಧ್ರಪ್ರದೇಶಕ್ಕೆ ಸಾಗಿಸಲೆತ್ನಿಸುತ್ತಿದ್ದಾಗ ಪ್ರಕರಣ ಬೆಳಕಿಗೆ ಬಂದಿತ್ತು.