ಮಂಗಳೂರು, ಅ. 10(DaijiworldNews/PY): ಸ್ನ್ಯಾಪ್ ಡೀಲ್ನಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದರೆ ಜಾಗ್ರತೆ ವಹಿಸಿ ಏಕೆಂದರೆ, ಸ್ನ್ಯಾಪ್ಡೀಲ್ ಹೆಸರಿನಲ್ಲಿ ಜನರನ್ನು ವಂಚಿಸುವ ಜಾಲ ಸಕ್ರಿಯವಾಗಿದೆ.

ನಿಮ್ಮ ಹೆಸರಿಗೆ ಬಹುಮಾನ ಬಂದಿದೆ ಎಂದು ಮರಳು ಮಾಡುತ್ತಾರೆ. ಅಲ್ಲದೇ, ಸ್ನ್ಯಾಪ್ಡೀಲ್ ಹೆಸರಿನಲ್ಲೇ ಕರೆ ಮಾಡಿ ನಿಮಗೆ ಮೋಸ ಮಾಡುತ್ತಾರೆ. ಹಾಗಾಗಿ, ಗ್ರಾಹಕರೇ, ಕರಾವಳಿ ಜನರೇ ದಯವಿಟ್ಟು ಈ ಬಗ್ಗೆ ಎಚ್ಚರ ವಹಿಸಿ. ಕಳೆದ ಹಲವಾರು ದಿನಗಳಿಂದ ಇಂತಹ ಸಕ್ರಿಯ ಜಾಲ ಕಾರ್ಯನಿರ್ವಹಿಸುತ್ತಿದೆ. ಗಿಫ್ಟ್ ಆಫರ್ಗಳಿಗೆ ಮರಳಾಗುವ ಮುನ್ನ ಎಚ್ಚರ ವಹಿಸಿ.
ಮಂಗಳೂರಿನ ವ್ಯಕ್ತಿಯೊಬ್ಬರು ಅ.3ರಂದು ಸುಮಾರು 330 ರೂ.ಗಳ ವಸ್ತುವೊಂದನ್ನು ಸ್ನ್ಯಾಪ್ಡೀಲ್ನಲ್ಲಿ ಬುಕ್ ಮಾಡಿದ್ದರು. ಆದರೆ, ಇವರು ಬುಕ್ ಮಾಡಿರುವ ವಸ್ತು ಇನ್ನೂ ಕೂಡಾ ಅವರ ಕೈ ಸೇರಿಲ್ಲ. ಅ.7ರಂದು ಇವರ ಮೊಬೈಲ್ಗೆ ಒಂದು ಮೆಸೇಜ್ ಬರುತ್ತದೆ. ಹಾಗಾಗಿ ಈ ಬಗ್ಗೆ ಅವರು ಗಮನವಹಿಸಿರಲಿಲ್ಲ. ಬಳಿಕ ಕೂಡಲೇ ಅವರಿಗೊಂದು ಕರೆ ಬಂದಿದ್ದು, ನಾನು ಸ್ನ್ಯಾಪ್ಡೀಲ್ನಿಂದ ಮಾತನಾಡುತ್ತಿದ್ದೇನೆ. ನೀವು 330ರೂ ಗಳ ವಸ್ತುವೊಂದನ್ನು ಖರೀದಿಸಿದ್ದೀರಾ ಎಂದು ಕೇಳಿದ್ದು, ಈ ವಸ್ತು ನಿಮಗೆ ತಲುಪಿಲ್ಲ. ಕೂಡಲೇ, ತಲುಪುತ್ತದೆ. ಆದರೆ, ನಿಮಗೊಂದು ಬಂಪರ್ ಬಹುಮಾನವಿದೆ ಎಂದು ಹೇಳಿದ್ದಾರೆ. ಬಳಿಕ ಮೊಬೈಲ್ಗೆ ಬಂದಿದ್ದ ಮೆಸೇಜ್ ಅನ್ನು ಪರಿಶೀಲಿಸಿದಾಗ ಸ್ನ್ಯಾಪ್ಡೀಲ್ನ ಹೆಸರಿನಿಂದ ಮೆಸೇಜ್ವೊಂದು ಬಂದಿತ್ತು. ಮೆಸೇಜ್ ತೆರೆದು ನೋಡಿದಾಗ ಅದರಲ್ಲಿ ಒಂದು ಲಿಂಕ್ ಇತ್ತು. ಆ ಲಿಂಕ್ ಓಪನ್ ಮಾಡಿದ ಬಳಿಕ ಮೊಬೈಲ್ ಸಂಖ್ಯೆಯನ್ನು ನಮೂದಿಸಿದಾಗ, ಓಟಿಪಿ ಸಂಖ್ಯೆ ಬರುತ್ತದೆ. ಈ ಸಂಖ್ಯೆಯನ್ನು ಹಾಕಿದಾಗ ಬಹುಮಾನ ಗೆದ್ದಿರುವ ಬಗ್ಗೆ ಮಾಹಿತಿ ಬಂದಿದ್ದು, ಇದರಲ್ಲಿ ಮಂಗಳೂರಿನ ವ್ಯಕ್ತಿಯ ವಿಳಾಸ ಸರಿಯಾಗಿ ನಮೂದಿಸಲಾಗಿತ್ತು.
ಬಳಿಕ ಕರೆ ಮಾಡಿದ ವ್ಯಕ್ತಿ, ನೀವು ಕಾರನ್ನು ಪಡೆದುಕೊಳ್ಳಬಹುದು. ಆದರೆ, ನೀವು 4,150 ರೂ. ಅನ್ನು ನೀಡಬೇಕು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಹಕ, ನನ್ನ ಬಳಿ ಯಾವುದೇ ಪೇಟಿಎಂ, ಗೂಗಲ್ ಪೇ ಎನ್ನುವ ಆನ್ಲೈನ್ ಆಪ್ಗಳಿಲ್ಲ. ಬ್ಯಾಂಕ್ಗೆ ಹೋಗಿ ಹಣ ಪಡೆದುಕೊಳ್ಳಬೇಕು. ನಾನು ಹಳ್ಳಿಯವರು. ನಮಗೆ ಈ ರೀತಿಯಾದ ವ್ಯವಸ್ಥೆಯಿಲ್ಲ. ಅಲ್ಲದೇ, ನನಗೆ ಬ್ಯಾಂಕ್ಗೆ ತೆರಳಲು ಒಂದು ಗಂಟೆ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ಕರೆ ಮಾಡಿದಾತ, ನಿಮಗೆ 8 ಲಕ್ಷದ 30 ಸಾವಿರ ಹಣ ಬೇಕಾ ಅಥವಾ ಕಾರು ಬೇಕಾ ಎಂದು ಕೇಳಿದ್ದು, ಹಾಗಾದರೆ, ನಿಮ್ಮ ಬ್ಯಾಂಕ್ ಮಾಹಿತಿ ನೀಡಿ ಎಂದು ಕೇಳಿದ್ದಾನೆ. ಈ ವೇಳೆ ಗ್ರಾಹಕ ಬ್ಯಾಂಕ್ ಮಾಹಿತಿಯನ್ನು ನೀಡಿದ್ದಾರೆ. ನೀವು 4,150 ರೂ ಕಟ್ಟಿದ ಕೂಡಲೇ ವಾಟ್ಸಾಪ್ ಮೂಲಕ ನಾವು ರಶೀದಿ ಕಳಿಸುತ್ತೇವೆ. ಬಳಿಕ 8 ಲಕ್ಷ ರೂ ಅನ್ನು ವರ್ಗಾವಣೆ ಮಾಡುತ್ತೇವೆ ಎಂದು ಹೇಳಿದ್ದಾನೆ.
ಇದಾದ ಬಳಿಕ ಪುನಃ ಕರೆ ಮಾಡಿದ ಆತ, ಬ್ಯಾಂಕ್ಗೆ ತೆರಳಿದ್ದೀರಾ ಹಣ ವರ್ಗಾವಣೆ ಮಾಡಿದ್ದೀರಾ ಎಂದು ಕೇಳಿದ್ದಾನೆ. ಆದರೆ, ಗ್ರಾಹಕರಿಗೆ ಇಂತಹ ಜಾಲ ಬಗ್ಗೆ ಮುಂಚೆಯೆ ಮಾಹಿತಿ ಇದ್ದ ಕಾರಣ ಈ ಬಗ್ಗೆ ಎಚ್ಚೆತ್ತುಕೊಂಡಿದ್ದಾರೆ. ಬಳಿಕ ಸ್ನ್ಯಾಪ್ಡೀಲ್ಗೆ ಕರೆ ಮಾಡಿದ ಗ್ರಾಹಕ ಈ ಬಗ್ಗೆ ಹೇಳಿದ್ದಾರೆ. ನಮ್ಮ ಹೆಸರಿನಲ್ಲಿ ಈ ರೀತಿಯಾಗಿ ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ನೀಡಿ ಎಂದು ಹೇಳಿದ್ದಾರೆ.
ಹಾಗಾಗಿ ಇಂತಹ ಕರೆ ಬಂದರೆ, ದಯವಿಟ್ಟು ನಿಮ್ಮ ಬ್ಯಾಂಕ್ ಮಾಹಿತಿಗಳನ್ನು ನೀಡಬೇಡಿ. ಇಂತಹ ವಂಚನೆಯ ಕರೆಯ ಬಗ್ಗೆ ಎಚ್ಚರಿಕೆ ವಹಿಸಿ.