ಮಂಗಳೂರು, ಅ. 10(DaijiworldNews/PY): ಹೆಬ್ಬಾವಿನ ಕಡಿತಕ್ಕೆ ಒಳಗಾದ 10 ವರ್ಷದ ಬಾಲಕ ಬೆಚ್ಚಿಬೀಳದೆ, ಹಾವನ್ನು ಕಾಲಿನಿಂದ ಒದ್ದು ಓಡಿಸಿ, ಪಾರಾದ ಘಟನೆ ಬುಧವಾರ ಮಂಗಳೂರಿನಲ್ಲಿ ನಡೆದಿದೆ.

ಹೆಬ್ಬಾವಿನಿಂದ ಪಾರಾದ ಬಾಲಕನನ್ನು ಮಣ್ಣಗುಡ್ಡೆ ಸಮೀಪದ ವಾದಿರಾಜ ನಗರದ ಬಿ.ಗೋಪಾಲಕೃಷ್ಣ ಪೈ ಅವರ ಪುತ್ರ ಸಂಕಲ್ಪ್ ಜಿ.ಪೈ (10) ಎಂದು ಗುರುತಿಸಲಾಗಿದೆ. ಸಂಕಲ್ಪ್ ಉರ್ವ ಕೆನರಾ ಶಾಲೆಯ 5ನೇ ತರಗತಿ ವಿದ್ಯಾರ್ಥಿ.
ಸಂಕಲ್ಪ್ ಬುಧವಾರ ಸಂಜೆ ಪೂಜೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ತನ್ನ ಮನೆಯ ಸಮೀಪವಿರುವ ದೇವಾಲಯದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.
ಮನೆಯ ಅಂಗಳದಲ್ಲಿದ್ದ ಹೆಬ್ಬಾವು ಚರಂಡಿ ನೀರಿನ ಪೈಪ್ಲೈನ್ನಿಂದ ಹೊರಬಂದಿದ್ದು, ಬಾಲಕನ ಬಲಗಾಲಿಗೆ ಕಚ್ಚಿದೆ. ಸುತ್ತಲೂ ಕತ್ತಲಿದ್ದ ಕಾರಣ ಹೆಬ್ಬಾವು ಇರುವುದು ಬಾಲಕನಿಗೆ ತಿಳಿದಿರಲಿಲ್ಲ. ಹಾವು ಕಚ್ಚಿದ್ದ ತಕ್ಷಣ ಬಾಲಕ ತನ್ನ ಎಡ ಕಾಲಿನಿಂದ ಹಾವಿನ ತಲೆಗೆ ಬಲವಾಗಿ ಒದೆದಿದ್ದಾನೆ. ಆ ವೇಳೆ ಹಾವು ಪೈಪ್ಲೈನ್ನ ಒಳಗೆ ಹೋಗಿ ಅವಿತುಕೊಂಡಿದೆ. ಈ ಸಂದರ್ಭ ಬಾಲಕ ಕೂಗುತ್ತಾ ಮಠದ ಕಡೆಗೆ ಓಡಿ ಹೋಗಿ ಹಾವು ಇರುವ ಬಗ್ಗೆ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕೆ ಅಕ್ಕ-ಪಕ್ಕದ ಜನರು ಜಮಾಯಿಸಿದ್ದಾರೆ.
ವಿಚಾರ ತಿಳಿದ ಸಂಕಲ್ಪ್ನ ತಂದೆ ಆತನನ್ನು ಆಸ್ಪತ್ರಗೆ ಕರೆದೊಯ್ದಿದ್ದಾರೆ. ಆದರೆ, ಬಾಲಕನಿಗೆ ಕಚ್ಚಿದ ಹಾವು ವಿಷಕಾರಿಯೇ ಅಲ್ಲವೇ ಎನ್ನುವುದು ಖಚಿತವಾಗದ ಕಾರಣ ಅಲ್ಲಿನ ವೈದ್ಯರು ಬಾಲಕನನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಸಲಹೆ ನೀಡಿದರು. ಬಳಿಕ ಚಿಲಿಂಬಿಯ ವೈದ್ಯರ ಬಳಿಕ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಕೊಡಿಸಿದ್ದರು.
ಆ ವೇಳೆಗಾಗಲೇ ಜನರು ಹಾವು ಹಿಡಿಯುವ ವ್ಯಕ್ತಿಯನ್ನು ಕರೆಸಿದ್ದು, ಪೈಪ್ಲೈನ್ಗೆ ಹೊಗೆ ಹಾಕಿ ಹಾವನ್ನು ಹಿಡಿದಿದ್ದಾರೆ. ಆಗ ಬಾಲಕನಿಗೆ ಕಚ್ಚಿದ್ದು ಹೆಬ್ಬಾವು ಎಂದು ತಿಳಿದುಬಂದಿದೆ. ನಂತರ ಹಾವನ್ನು ಪಿಲಿಕುಳ ನಿಸರ್ಗಧಾಮಕ್ಕೆ ಬಿಡಲಾಯಿತು.
ಬಾಲಕ ಆಘಾತದಿಂದ ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ. ಈಗ ಆತ ಮಥದ ಪೂಜೆಗೆ ಸಂಜೆಯ ಬದಲು ಮಧ್ಯಾಹ್ನ ಹೋಗುತ್ತಾನೆ ಎಂದು ಬಾಲಕನ ತಂದೆ ಹೇಳಿದ್ದಾರೆ. ಗಾಯ ಗುಣವಾಗುತ್ತಿದೆ. ಹಾಗೂ ಆತನೂ ಚೇತರಿಸಿಕೊಳ್ಳುತ್ತಿದ್ದಾನೆ. ಎರಡು ವಾರಗಳ ಹಿಂದೆ ಂಗಳದಲ್ಲಿ ಒಂದು ಹೆಬ್ಬಾವು ಕಾಣಿಸಿಕೊಂಡಿತ್ತು. ಅದನ್ನು ಪಿಲಿಕುಳ ನಿಸರ್ಗಧಾಮಕ್ಕೆ ಬಿಡಲಾಗಿತ್ತು. ಅಲ್ಲದೇ, ಇತ್ತಿಚೆಗೆ ನಮ್ಮ ಮನೆಯಲ್ಲಿದ್ದ ಎರಡು ಬೆಕ್ಕುಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಹೆಬ್ಬಾವು ಬೆಕ್ಕುಗಳನ್ನು ತಿಂದಿರಬಹುದು ಎನ್ನುವ ಅನುಮಾನವಿದೆ. ಸುಮಾರು ಒಂಭತ್ತು ಅಡಿ ಉದ್ದದ ಈ ಹೆಬ್ಬಾವು ಬೆಕ್ಕುಗಳ ರುಚಿ ಸಿಕ್ಕಿದ ಕಾರಣ ಮತ್ತೆ ಇಲ್ಲಿಗೆ ಬಂದಿರಬಹುದು ಎಂದು ತಿಳಿಸಿದ್ದಾರೆ.