ಕಾಸರಗೋಡು, ಅ. 10 (DaijiworldNews/HR): ಗಾಂಜಾ ಮತ್ತಿನಲ್ಲಿ ಯುವಕನೋರ್ವ ದಾಂಧಲೆ ನಡೆಸಿ ಪೊಲೀಸ್ ವಾಹನಕ್ಕೆ ಹಾಗೂ ಆಸ್ಪತ್ರೆಯ ವಸ್ತುಗಳು ಹಾನಿಮಾಡಿದ ಘಟನೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.

ಸಾಂಧರ್ಭಿಕ ಚಿತ್ರ
ಉದುಮದ ಅಬ್ದುಲ್ ನಾಸರ್ ಬಂಧಿತ ಆರೋಪಿಯಾಗಿದ್ದು, ಶುಕ್ರವಾರ ಮುಂಜಾನೆ ಉದುಮದ ತಾಜ್ ಹೋಟೆಲ್ಗೆ ನುಗ್ಗಿ ಕಾವಲುಗಾರನಿಗೆ ರಿವಾಲ್ವರ್ ತೋರಿಸಿ ಬೆದರಿಸಿ ದಾಂಧಲೆ ನಡೆಸಿದ್ದನು. ದಾಂಧಲೆ ಬಳಿಕ ಹೋಟೆಲ್ ನಿಂದ ಪರಾರಿಯಾಗಿದ್ದ ನಾಸರ್ ನನ್ನು ಬೇಕಲ ಠಾಣಾ ಪೊಲೀಸರು ಸಿಸಿಟಿವಿ ಕ್ಯಾಮರಾ ಪರಿಶೀಲಿಸಿ ಬಳಿಕ ಮನೆಯಿಂದ ಈತನನ್ನು ಬಂಧಿಸಿದ್ದರು. ಬಳಿಕ ಈತನನ್ನು ತಪಾಸಣೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆ ತಂದ ಸಂದರ್ಭದಲ್ಲಿ ದಾಂಧಲೆ ನಡೆಸಿದ್ದಾನೆ.
ಪೊಲೀಸ್ ವಾಹನದ ಮೇಲೆ ಹತ್ತಿದ ಈತ ಬೀಕೊನ್ ಲೈಟ್ ಗಳನ್ನು ಹುಡಿ ಮಾಡಿದ್ದಾನೆ. ಬಳಿಕ ಗಾಜಿನ ತುಂಡುಗಳನ್ನೆತ್ತಿ ಪೊಲೀಸ್ ವಾಹನದ ಮೇಲೆ ಹಲವು ಸಮಯ ತನ್ನ ಪರಾಕ್ರಮ ನಡೆಸಿದ್ದಾನೆ.
ಆಸ್ಪತ್ರೆಯ ಕಿಟಿಕಿ, ಬಾಗಿಲುಗಳು ಹಾಗೂ ಶೌಚಾಲಯದಲ್ಲಿದ್ದ ಬಕೆಟ್ ಗಳನ್ನು ಹಾನಿಗೊಳಿಸಿದ್ದಾನೆ. ಹಲವು ಸಮಯದ ರಂಪಾಟದ ಬಳಿಕ ಆತನನ್ನು ವಶಕ್ಕೆ ಪಡೆದು ಬೇಕಲ ಠಾಣೆಗೆ ಕರೆದೊಯ್ದರು.
ಈತನ ವಿರುದ್ಧ ಮಾರಕಾಸ್ತ್ರ ಕೈವಶ ಇರಿಸಿದ್ದ, ಕೊಲೆ ಬೆದರಿಕೆ, ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮೊದಲಾದ ಪ್ರಕರಣಗಳನ್ನು ದಾಖಲಿಸಲಾಗಿದೆ.