ಮಂಗಳೂರು, ಅ. 10(DaijiworldNews/PY): ಕೆಂಪು ಬಾಕ್ಸೈಟ್, ಕರ್ನಾಟಕದ ನೈಸರ್ಗಿಕ ಗಣಿ ಸಂಪನ್ಮೂಲಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಕೋಟ್ಯಾಂತರ ರೂ. ನಷ್ಟವನ್ನುಂಟು ಮಾಡಿದೆ ಎಂದು ಕೆಲವರು ಆರೋಪಿಸಿದ್ದು, ಈ ಹಗರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ಪರಾರಿಯಾದ ಪ್ರಮುಖ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಗಣಿಕಾರಿಕೆ ಪ್ರದೇಶದಲ್ಲಿ ಪತ್ತೆಯಾದ ಲಾರಿ, ಮೂರು ಜೆಸಿಬಿ, ಐದು ಅಗೆಯುವ ಯಂತ್ರ ಸೇರಿದಂತೆ 30ಕ್ಕೂ ಅಧಿಕ ವಾಹನಗಳನ್ನು ಪೊಲೀಶರು ವಶಪಡಿಸಿಕೊಂಡಿದ್ದಾರೆ. ಕೆಂಪು ಬಾಕ್ಸೈಟ್ ಅನ್ನು ಇತರ ರಾಜ್ಯಗಳಿಗೆ ಸಾಗಿಸಲು ಕೇರಳ ಸರ್ಕಾರ ನಿಷೇಧಿಸಿದ ನಂತರ ಗುತ್ತಿಗೆದಾರರು ತಮ್ಮ ವಾಸಸ್ಥಾನವನ್ನು ಕರ್ನಾಟಕಕ್ಕೆ ಸ್ಥಳಾಂತರಿಸಿದ್ದರು. ಕೇರಳ ಹಾಗೂ ತಮಿಳನಾಡಿನ ಗುತ್ತಿಗೆದಾರರು ಇಲ್ಲಿಂದ ಸಾವಿರಾರು ಟನ್ ಕೆಂಪು ಬಾಕ್ಸೈಟ್ ಅನ್ನು ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ಸಾಗಿಸಿದ್ದಾರೆ. ಈ ವಸ್ತುವನ್ನು ಸಿಮೆಂಟ್ ಹಾಗೂ ಅಲ್ಯೂಮಿನಿಯಂ ಕೈಗಾರಿಗಳು ಬಳಸುತ್ತವೆ ಎಂದು ಹೇಳಲಾಗುತ್ತದೆ.
ತಮಿಳುನಾಡಿನ ಶ್ರೀನಿವಾಸ್ ಎಂಬಾತ ಈ ವ್ಯವಹಾರದ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ. ಶ್ರೀನಿವಾಸ್ ಅವರು ಕೇರಳ ಸರ್ಕಾರದ ನಕಲಿ ಪರವಾನಗಿ ಹೊಂದಿದ್ದಾರೆ ಎಂದೂ ಹೇಳಲಾಗುತ್ತಿದ್ದು, ಆ ಆಧಾರದ ಮೇಲೆ ಕರ್ನಾಟಕದಿಂದ ಕೆಂಪು ಬಾಕ್ಸೈಟ್ ಅನ್ನು ಅಗೆದು ಸಾವಿರಾರು ಟನ್ ಅನ್ನು ಆಂಧ್ರಪ್ರದೇಶಕ್ಕೆ ಸಾಗಿಸಿದ್ದಾರೆ. ಗಣಿ ಇಲಾಖೆಯ ನಿಯಮಗಳ ಪ್ರಕಾರ, ಬಾಕ್ಸೈಟ್ ಮಾರಾಟದ ಬೆಲೆಯ 5ರಷ್ಟನ್ನು ಸರ್ಕಾರಕ್ಕೆ ನೀಡಬೇಕಾಗಿದೆ. ಕೇರಳದ ನಕಲಿ ಪರವಾನಗಿಯನ್ನು ಬಳಸಿದ್ದರಿಂದ, ಕರ್ನಾಟಕ ಸರ್ಕಾರಕ್ಕೆ ಯಾವುದೇ ಮೊತ್ತವನ್ನು ಪಾವತಿಸಿಲ್ಲ. ಈ ಕಾರಣದಿಂದ ರಾಜ್ಯಕ್ಕೆ ಐದು ಕೋಟಿ ರೂ. ನಷ್ಟವಾಗಿದೆ.
ಗಣಿ ಪ್ರದೇಶದ ಮೇಲೆ ದಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ವಿಭಾಗದ ಅಧಿಕಾರಿಗಳು ಮತ್ತು ಮಂಗಳೂರು ಸಹಾಯಕ ಪೊಲೀಸ್ ಆಯುಕ್ತ ಮದನ್ ಮೋಹನ್ ಅವರು, ಗಣಿಗಾರಿಕೆ ಸಂಸ್ಥೆಯ ಉದ್ಯೋಗಿ ಅರವಿಂದ್ ಕುಮಾರ್ ಅವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಶ್ರೀನಿವಾಸ್ ಪರಾರಿಯಾಗಿದ್ದಾನೆ.