ಉಡುಪಿ, ಅ. 10(DaijiworldNews/PY): ವಿಶ್ವ ವಿಶ್ರಾಂತಿ ಮತ್ತು ಪ್ರಶಾಮಕ ಆರೈಕೆ ದಿನಾಚರಣೆಯ ಚಟುವಟಿಕೆಯ ಅಂಗವಾಗಿ, ಅ.10ರ ಶನಿವಾರದಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಣಿಪಾಲದ ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗವು ದೀರ್ಘಕಾಲದ ರೋಗದಿಂದ ಮಡಿದ ತಮ್ಮ ಪ್ರೀತಿಪಾತ್ರರ ನೆನಪಿಗಾಗಿ ಅವರ ಸಂಬಂಧಿಕರಿಂದ ಸಸಿನೆಡುವ ಕಾರ್ಯಕ್ರಮವನ್ನು ಆಯೋಜಿದ್ದು, ಮಣಿಪಾಲದ ಎಂಡ್-ಪಾಯಿಂಟ್ ಗೇಟ್ ಬಳಿಯ ಮಕ್ಕಳ ಉದ್ಯಾನವನದಲ್ಲಿ ಕಾರ್ಯಕ್ರಮ ನಡೆಯಿತು.


ನಂತರ, ಶಿರ್ಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆಯ ಮುಂಭಾಗದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಗಿಡಮೂಲಿಕೆ ಸಸ್ಯಗಳನ್ನು ವಿತರಿಸಲಾಯಿತು. ಪ್ರತೀ ಅಕ್ಟೋಬರ್ ತಿಂಗಳ ಎರಡನೇ ಶನಿವಾರವನ್ನು ವಿಶ್ವ ಆರೈಕೆ ಮತ್ತು ಪ್ರಶಾಮಕ ಚಿಕಿತ್ಸಾ ದಿನವನ್ನಾಗಿ ಆಚರಿಸಲಾಗುತ್ತದೆ ಮತ್ತು ಆ ಮೂಲಕ ಪ್ರಶಾಮಕ ಆರೈಕೆಯ ಕುರಿತು ಅರಿವು ಮೂಡಿಸುವ ಮತ್ತು ಅದನ್ನು ಜಾಗತಿಕವಾಗಿ ಎಲ್ಲೆಡೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಕಾರ್ಯಕ್ರಮದ ಮುಖ್ಯ ಅತಿಥಿಯದ ಕಸ್ತೂರ್ಬಾ ಆಸ್ಪತ್ರೆ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಶರತ್ ಕುಮಾರ್ ರಾವ್ ಅವರು ಮಾತನಾಡಿ,"ಜಗತ್ತಿನಲ್ಲಿ, 32.5 ಮಿಲಿಯನ್ ಜನರಿಗೆ ಪ್ರಶಾಮಕ ಆರೈಕೆಯ ಅಗತ್ಯವಿದೆ, ಆದರೆ ದುರದೃಷ್ಟವಶಾತ್ ಈಗ ಕೇವಲ 10% ಜನರಿಗೆ ಮಾತ್ರ ಪ್ರಶಾಮಕ ಆರೈಕೆ ದೊರೆಯುತ್ತಿದೆ. ನಾವು ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶೇಷವಾಗಿ ಕ್ಯಾನ್ಸರ್ ರೋಗಿಗಳಿಗೆ ಪ್ರಶಾಮಕ ಚಿಕಿತ್ಸೆಯನ್ನು ಆರಂಬಿಸದೆವು, ಈಗ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇತರರಿಗೂ ಈ ಸೌಲಭ್ಯವನ್ನು ವಿಸ್ತರಿಸಿದ್ದೇವೆ” ಎಂದರು.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ನಿರ್ವಹಣಾಧಿಕಾರಿ ಸಿ ಜಿ ಮುತ್ತಣ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಕಾರ್ಯಕ್ರಮದ ಗೌರವ ಅತಿಥಿಗಳಾಗಿದ್ದರು. ಪ್ರಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗದ ಮುಖ್ಯಸ್ಥ ಡಾ. ನವೀನ್ ಎಸ್ ಸಲಿನ್ಸ್ ಮತ್ತು ಡಾ. ಸೀಮಾ ರಾವ್ ಉಪಸ್ಥಿತರಿದ್ದರು .
ವಿಶ್ವ ವಿಶ್ರಾಂತಿ ಮತ್ತು ಪ್ರಶಾಮಕ ಆರೈಕೆ ದಿನವು ವಿಶ್ವದಾದ್ಯಂತ ಪ್ರಶಾಮಕ ಆರೈಕೆಯನ್ನು ಆಚರಿಸಲು ಮತ್ತು ಬೆಂಬಲಿಸಲು ಒಂದು ಏಕೀಕೃತ ಕ್ರಿಯೆಯ ದಿನವಾಗಿದೆ. ಈ ವರ್ಷದ ದ್ಯೇಯ ವಾಕ್ಯ “ನನ್ನ ಕಾಳಜಿ, ನನ್ನ ಹಿತ”. ಈ ದಿನವು ರೋಗಿಗಳು ಮತ್ತು ಅವರ ಕುಟುಂಬಗಳ ನೋವು ಮತ್ತು ಸಂಕಟಗಳನ್ನು ನಿವಾರಿಸಲು ಪ್ರಶಾಮಕದ ಆರೈಕೆಯನ್ನು ಪ್ರತಿ ದೇಶದ ಮುಖ್ಯವಾಹಿನಿಯ ಆರೋಗ್ಯ ವ್ಯವಸ್ಥೆಗಳಲ್ಲಿ ಸಂಯೋಜಿಸುವ ಅಗತ್ಯವನ್ನು ಒತ್ತಿಹೇಳುತ್ತದೆ. ಪ್ರಶಾಮಕ ಆರೈಕೆಯು ರೋಗಿಗೆ ಉತ್ತಮ ಗುಣಮಟ್ಟದ ಆರೈಕೆ ಮತ್ತು ನೆಮ್ಮದಿಯ ಜೀವನವನ್ನು ಖಾತ್ರಿಗೊಳಿಸುತ್ತದೆ, ಕುಟುಂಬ ಸದಸ್ಯರು ತಮ್ಮ ಪ್ರೀತಿಪಾತ್ರರಿಗೆ ಉತ್ತಮ ಆರೈಕೆ ಮತ್ತು ನೆಮ್ಮದಿಯ ಜೀವನವನ್ನು ಒದಗಿಸಲು ಸಹಾಯ ಮಾಡುತ್ತದೆ, ಮತ್ತು ಆರೋಗ್ಯ ಪೂರೈಕೆದಾರರಿಗೆ ರೋಗಿಗಳು/ಕುಟುಂಬಗಳಿಗೆ ಉತ್ತಮ ಆರೈಕೆ ಮತ್ತು ನೆಮ್ಮದಿ ಬದುಕು ರೂಪಿಸಲು ನೆರವಾಗುತ್ತದೆ. ಪ್ರಶಾಮಕ ಆರೈಕೆಯು, ಸಾಂಕ್ರಾಮಿಕ ರೋಗದ ಈ ಸಂದರ್ಭಕ್ಕೆ ವಿಶೇಷವಾಗಿ ಪ್ರಸ್ತುತವಾಗಿದೆ, ಪ್ರಶಾಮಕ ಆರೈಕೆಯನ್ನು ಒಳಗೊಂಡಿರದ ಯಾವುದೇ ವಿಧಾನವು “ವೈದ್ಯಕೀಯವಾಗಿ ಕೊರತೆ ಮತ್ತು ನೈತಿಕವಾಗಿ ವಿವರಿಸಲಾಗದು” ಎಂದು ವಿಶ್ವ ಅರೋಗ್ಯ ಸಂಸ್ಥೆಯು ಪುನರುಚ್ಚರಿಸಿದೆ.
ಪ್ರಶಾಮಕ ಆರೈಕೆಯ ಪ್ರಯೋಜನವನ್ನು ಪಡೆದುಕೊಂಡ ಸಂಬಂಧಿಕರು ತಮ್ಮ ಅನುಭವವನ್ನು ಹಂಚಿಕೊಂಡರು. ಡಾ. ಸೀಮಾ ರಾವ್ ಕಾರ್ಯಕ್ರಮದ ಕುರಿತು ಅವಲೋಕನ ನೀಡಿದರು ಮತ್ತು ವಂದನಾರ್ಪಣೆಗೈದರು.