ಉಡುಪಿ, ಅ. 10 (DaijiworldNews/MB) : ಹತ್ರಸ್ನಲ್ಲಿ ನಡೆದ ಅತ್ಯಾಚಾರ ಕೊಲೆ ಪ್ರಕರಣದ ಹಿಂದೆ ಪಾಪ್ಯುಲರ್ ಫ್ರ್ಯಾಂಟ್ ಆಫ್ ಇಂಡಿಯಾ ಎಸ್ಡಿಪಿಐನ ವ್ಯವಸ್ಥಿತವಾದ ಹುನ್ನಾರ ಅಡಗಿದೆ ಎಂಬ ಮಾಹಿತಿ ಇದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.



ಅವರು ಇಂದು ಶನಿವಾರ ಹೋಟೆಲ್ ಕಿದಿಯೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, "ಮನಿಶಾಳ ಕೊಲೆಯನ್ನು ಯಾರೇ ಮಾಡಿರಲಿ ಜಾತಿ ಧರ್ಮ ಬೇಧವಿಲ್ಲದೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಭವಿಷ್ಯದಲ್ಲಿ ಈ ಸಂಘಟನೆಗಳು ನಿಷೇಧ ಆಗಬೇಕು, ಆಗುತ್ತದೆ ಎಂದು ಹೇಳಿದರು.
ಉಪಚುನಾವಣೆ ತಯಾರಿ ಚೆನ್ನಾಗಿ ನಡೆಯುತ್ತಿದೆ. ಕಾಂಗ್ರೆಸ್ನ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಶಿರಾದಲ್ಲೇ ಭಿನ್ನಮತವಿದೆ. ಮೂಡಲ ಗಿರಿಯಪ್ಪನವರ ಮಗ ರಾಜೇಶ್ ಗೌಡ ಎನ್ನುವುದು ಅಭ್ಯರ್ಥಿ ಖಚಿತವಾಗಿದೆ. ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಚೆನ್ನಾಗಿದೆ. ಎರಡು ಕಡೆಯಲ್ಲೂ ಬೇರೆ ಯಾವುದೇ ಪಕ್ಷದ ಅಭ್ಯರ್ಥಿ ನಿಂತರೂ ಏನೂ ವ್ಯತ್ಯಾಸವಾಗಲ್ಲ. ಬಿಜೆಪಿ ಹೆಚ್ಚು ಮತಗಳಿಸಿ ಎರಡು ಸೀಟನ್ನು ಗೆಲ್ಲುತ್ತೆ ಎನ್ನುವ ವಿಶ್ವಾಸವಿದೆ. ನಮ್ಮ ಸಂಖ್ಯೆಗೆ ಇನ್ನೆರಡು ಮಂದಿ ಸೇರಿದಂತೆ ಆಗುತ್ತದೆ. ಉಪಚುನಾವಣೆಯ ಫಲಿತಾಂಶದಲ್ಲೂ ಕಾಂಗ್ರೆಸ್ ಅಟ್ಟಹಾಸ ಮೆರೆಯೋಕೆ ಆಗಲ್ಲ ಎಂದರು.
ಒಂದೆರಡು ಮಕ್ಕಳಿರುವ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕ ವ್ಯಕ್ತಪಡಿಸುತ್ತಾರೆ. ಮೋದಿಯ ಮಾತಿನಂತೆ ಮೊದಲು ಜೀವ ಆಮೇಲೆ ಜೀವನ. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಮಕ್ಕಳ ಶಿಕ್ಷಣ ಒಂದು ಪ್ರಮುಖ ಘಟ್ಟ ಆಗಿರುವ ಹಿನ್ನೆಲೆ ವಿಶೇಷ ಗಮನ ಕೊಡಬೇಕು. ಈ ವರ್ಷದಲ್ಲಿ ಎಲ್ಲಾ ಮಕ್ಕಳನ್ನು ಉತ್ತೀರ್ಣಗೊಳಿಸಿ ಮುಂದಿನ ವರ್ಷದಲ್ಲಿ ಕೊರೊನಾ ನಿಗ್ರಹಕ್ಕೆ ಬಂದರೆ ಏಪ್ರಿಲ್ ನಂತರ ಶಾಲೆ ಆರಂಭಿಸಬಹುದು. ಸರಕಾರಕ್ಕೆ ನನ್ನ ಮನವಿಯು ಅದೇ ಆಗಿದೆ. ತಜ್ಞರ ಅಭಿಪ್ರಾಯ ತೆಗೆದುಕೊಳ್ಳಬೇಕು. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಮಕ್ಕಳಿಗೆ ಹೇಗೆ ಪರೀಕ್ಷೆ ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ ಆಗಬೇಕು. ಆನ್ ಲೈನ್ ಶಿಕ್ಷಣದ ಸಿಲೆಬಸ್ಗಳನ್ನೂ 50% ಗೆ ಇಳಿಸಿ ಅದರಲ್ಲೇ ಪರೀಕ್ಷೆ ನಡೆಸಿ ಎಲ್ಲ ತರಗತಿಯ ಮಕ್ಕಳನ್ನು ಪಾಸ್ ಮಾಡುವುದು ಉತ್ತಮ ಎಂದರು
ರೈತರಿಗೆ ಸಂಬಂಧಪಟ್ಟ ಕಾಯಿದೆಗಳು ಯಾವುದು ರೈತರಿಗೆ ವಿರೋಧವಿಲ್ಲ. ಎಪಿಎಂಸಿ ಕಾಯ್ದೆಯಿಂದ ಮಧ್ಯವರ್ತಿ ಹಾವಳಿ ತಪ್ಪುತ್ತದೆ. ಕೆಲವು ರೈತರು ರಾಜಕೀಯ ಭಾಷಣದ ಪ್ರಭಾವಕ್ಕೆ ಒಳಗಾಗಿದ್ದಾರೆ. ನಿಜವಾದ ರೈತರು ಈ ಕಾಯ್ದೆಗಳನ್ನು ಓದಬೇಕು ಎಂದು ಹೇಳಿದ್ದಾರೆ.
ರೈತರು ಹೋರಾಟ ಮಾಡಬೇಕು, ಅದು ಅವರ ಧ್ವನಿ. ಆದರೆ ತಪ್ಪು ಸಂದೇಶ ಹೋಗಬಾರದು. ಎಪಿಎಂಸಿ ಅಸ್ತಿತ್ವ ಕಳೆದುಕೊಳ್ಳಲ್ಲ. ರೈತನಿಗೆ ನೇರ ಮಾರುಕಟ್ಟೆ ಸಿಗುತ್ತದೆ. ಕಾಯ್ದೆಗಳ ಸಾಧಕ ಬಾಧಕ ತಿಳಿಬೇಕಾದರೆ ಕಾಯ್ದೆ ಅನುಷ್ಠಾನವಾಗಬೇಕು. ಲೋಪಗಳು ಇದ್ದಲ್ಲಿ ತಿದ್ದಲು ಅವಕಾಶ ಇದೆ ಎಂದು ಸಂಸದೆ ಶೋಭಾ ಸ್ಪಷ್ಟನೆ ನೀಡಿದರು.
ಕುಯ್ಲಾಡಿ ಸುರೇಶ್ ನಾಯಕ್, ಬಿಜಿಪಿ ಜಿಲ್ಲಾಧ್ಯಕ್ಷರು, ಮಟ್ಟಾರು ರತ್ನಾಕರ್ ಹೆಗ್ಡೆ, ಕರಾವಳಿ ಪ್ರಾಧಿಕಾರ ಅಧ್ಯಕ್ಷರು , ಪ್ರವೀಣ್ ಗುರ್ಮೆ, ಅಧ್ಯಕ್ಷರು, ಬಿಜೆಪಿ ರೈತ ಮೋರ್ಚಾ ಉಪಸ್ಥಿತರಿದ್ದರು.