ಉಡುಪಿ,ಅ. 10 (DaijiworldNews/MB) : ಹತ್ರಸ್ನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಸಮುದಾಯದ ಆರೋಪಿಗಳನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ಹಾಗೂ ಅಧಿಕಾರಿಗಳು ಕಾಪಾಡುತ್ತಿದ್ದಾರೆ ಎಂದು ಉಡುಪಿ ಚಲೋ ಸಂಘಟಕ ಬಿ.ಆರ್. ಭಾಸ್ಕರ್ ಪ್ರಸಾದ್ ಆರೋಪಿಸಿದರು. ಇದೇ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಅವರ ಶವದ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.







ಉತ್ತರ ಪ್ರದೇಶದ ಹತ್ರಸ್ನಲ್ಲಿ ದಲಿತ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಅಂಬೇಡ್ಕರ್ ಯುವಸೇನೆ ವತಿಯಿಂದ ಶನಿವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ನಿಗೆ ಯೋಗಿಯ ಗುಣವಿಲ್ಲ. ಆತ ಮಾನಸಿಕ ರೋಗಿಯಾಗಿದ್ದಾನೆ. ತಮ್ಮ ಹುದ್ದೆ ಮತ್ತು ಖಾವಿ ಬಟ್ಟೆಗೆ ಅವಮಾನ ಮಾಡುತ್ತಿದ್ದಾರೆ. ಮಾನಸಿಕ ರೋಗಿಯಾಗಿರುವ ಯೋಗಿಯ ಮೇಲೆ ಚುನಾವಣೆ ಪೂರ್ವ 52 ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಇವರ ಆಡಳಿತ ಪ್ರಾರಂಭವಾದ ಬಳಿಕ ರಾಜ್ಯದಲ್ಲಿ ಮೇಲ್ವರ್ಗದವರಿಂದ ದಲಿತರ ಮೇಲಿನ ಅತ್ಯಾಚಾರ ಹೆಚ್ಚಾಗುತ್ತಿದೆ ಎಂದು ಆರೋಪಿದರು.
ಯುವತಿ ಮೇಲಿನ ಅತ್ಯಾಚಾರ ಮತ್ತು ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಆ ಸರಕಾರ ಹೋಗಿರುವುದು ತೀರಾ ಖಂಡನೀಯ. ಸಂತ್ರಸ್ಥೆಯ ಮನೆಗೆ ತೆರಳುತ್ತಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರನ್ನು ಪೊಲೀಸರು ತಡೆದಿರುವುದು ಖಂಡನೀಯ. ಸ್ತ್ರೀಯರ ಬಗ್ಗೆ ಆಪಾರ ಗೌರವ ಎಂದು ಹೇಳಿಕೊಳ್ಳುವ ಬಿಜೆಪಿಯೇ ಈ ರೀತಿ ಅನಾಚಾರವಾಗಿ ವರ್ತಿಸುತ್ತಿದೆ ನಡೆಸಿದ್ದಾರೆ ಎಂದು ಟೀಕಿಸಿದ್ದಾರೆ.
ಕೇವಲ ತಮ್ಮ ಜಾತಿಗೆ ಸೇರಿದವನೆಂಬ ಕಾರಣಕ್ಕೆ ಕ್ರೂರ ಕೃತ್ಯ ಮಾಡಿದ ಅಪರಾಧಿಯನ್ನು ಯೋಗಿ ರಕ್ಷಣೆ ಮಾಡಲು ನಿಂತಿದ್ದಾನೆ. ಇದೇ ಜಾಗದಲ್ಲಿ ಉಚ್ಚ ಜಾತಿಯ ಹೆಣ್ಣು ಮಗಳಿದ್ದು ಆರೋಪಿಯು ದಲಿತನಾಗಿದ್ದಲ್ಲಿ ಆತ ಬೀದಿ ಹೆಣವಾಗಿರುತ್ತಿದ್ದ. ಇಂದು ಆರೋಪಿಯು ಬದುಕಿರೋದಕ್ಕೆ ನಮ್ಮ ದೇಶದ ಸಂವಿಧಾನದವೇ ಕಾರಣ. ದೇಶದ ವ್ಯವಸ್ಥೆ ಬದಲಾಗಬೇಕು. ದಲಿತರ ಮೇಲಿನ ದೌರ್ಜನ್ಯ ನಿಲ್ಲಬೇಕು. ಅದೆಷ್ಟೋ ಜೈಲಿನಲ್ಲಿರುವ ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು, ಎಂದು ಭಾಸ್ಕರ್ ಆಗ್ರಹಿಸಿದರು.
ಕಾರ್ಮಿಕ ಮುಖಂಡ ಬಿ.ಎಂ.ಭಟ್, ಮುಖಂಡರಾದ ಜಯನ್ ಮಲ್ಪೆ, ಸುಂದರ್ ಕಪ್ಪೆಟ್ಟು, ರಮೇಶ್ ಪಾಲ್, ಗಣೇಶ್ ನೆರ್ಗಿ, ಮಂಜುನಾಥ್ ಗಿಳಿಯಾರು, ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಮಲ್ಪೆ, ಕಾಪು ತಾಲೂಕು ಅಧ್ಯಕ್ಷ ಲೋಕೇಶ್ ಪಡುಬಿದ್ರಿ, ಮಲ್ಪೆ ಅಧ್ಯಕ್ಷ ಕೃಷ್ಣ ಶ್ರೀಯಾನ್ ನೆರ್ಗಿ, ಮುಖಂಡ ರಾದ ಮಂಜುನಾಥ್ ಕಪ್ಪೆಟ್ಟು, ಸಂತೋಷ್ ಕಪ್ಪೆಟ್ಟು, ಭಗವಾನ್ ಮಲ್ಪೆ, ಶಶಿಕಲಾ ತೊಟ್ಟಂ, ಕಾಂಗ್ರೆಸ್ ಪದಾಧಿಕಾರಿಗಳಾದ ರಮೇಶ್ ಕಾಂಚನ್, ವೆರೋನಿಕ ಕರ್ನೇಲಿಯೋ, ಡಾ| ಸುನೀತಾ, ಉದ್ಯಾವರ ನಾಗೇಶ್ ಕುಮಾರ್, ಅ.ಕ. ಡಿ.ಕೆ. ಶಿವಕುಮಾರ್ ಅಭಿಮಾನಿ ಸಂಘ ಜಿಲ್ಲಾ ಘಟಕಾಧ್ಯಕ್ಷ ಚರಣ್ ಬಗೇರ ದೊಡ್ಡಣಗುಡ್ಡೆ, ನಗರದ ಅಧ್ಯಕ್ಷ ಸುಹಾಸ್ ಎಸ್.ಪೂಜಾರಿ, ನಗರಸಭೆ ಮಾಜಿ ಅಧ್ಯಕ್ಷ ಯುವರಾಜ್ ಕೆ. ಉಪಸ್ಥಿತರಿದ್ದರು.