ಮಂಗಳೂರು, ಮೇ 18: ನಗರದಲ್ಲಿನ ಜನರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುವ ಉದ್ದೇಶದಿಂದ ಮಂಗಳೂರು ಪೊಲೀಸ್ ಕಮಿಷನರ್ ಕಛೇರಿಯಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ನಡೆಯಿತು.
ಪೊಲೀಸ್ ಕಮಿಷನರ್ ಕಛೇರಿಯಲ್ಲಿ ನಡೆದ ಪೋನ್ ಇನ್ ಕಾರ್ಯಕ್ರಮದಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ ಮಂಗಳೂರು ಪೋಲಿಸ್ ಆಯುಕ್ತ ವಿಪುಲ್ ಕುಮಾರ್ ಅಹವಾಲು ಸ್ವೀಕರಿಸಿದ್ದಾರೆ. ವಾಹನಗಳ ವೇಗದ ಮಿತಿಯನ್ನು ತಡೆಯಲು ನಗರದ ಮುಖ್ಯ ರಸ್ತೆಗಳಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಾಹನಗಳ ಅತಿಯಾದ ವೇಗವನ್ನು ತಡೆಯುವ ಉದ್ದೇಶದಿಂದ ನಗರದ ಹಲವೆಡೆ ರಸ್ತೆಗೆ ಸ್ಪೀಡ್ ಬ್ರೇಕರ್ ಹಾಕುವಂತೆ ನಾಗರಿಕರು ಮನವಿ ಮಾಡಿದ್ದಾರೆ. ಮಾತ್ರವಲ್ಲ, ಬಸ್ ನಿಲ್ದಾಣದಲ್ಲಿ ಸರಿಯಾದ ಆಸನದ ವ್ಯವಸ್ಥೆ ಇಲ್ಲದಿರುವ ಕುರಿತಂತೆ ಸಾರ್ವಜನಿಕರು ದೂರು ನೀಡಿದ್ದಾರೆ. ಈ ಕುರಿತು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಕೆಲ ಬಸ್ಸುಗಳಲ್ಲಿ ಹಿರಿಯರಿಗೆ ಅಗೌರವ ನೀಡಲಾಗುತ್ತಿದೆ. ಇಂತಹ ವರ್ತನೆಗಳನ್ನು ತಡೆಯಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.