ಬಂಟ್ವಾಳ, ಅ. 11 (DaijiworldNews/PY): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ವಿಟ್ಲ, ಲಯನ್ಸ್ ಕ್ಲಬ್ ವಿಟ್ಲ, ಗ್ರಾ.ಪಂ.ಕೆದಿಲ ಇದರ ಸಂಯುಕ್ತ ಆಶ್ರಯದಲ್ಲಿ "ಮಗಳನ್ನು ಉಳಿಸಿ, ಮಗಳನ್ನು ಓದಿಸಿ" ಯೋಜನೆಯಡಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಜಾಗೃತಿ ಜಾಥ ಕಾರ್ಯಕ್ರಮ ಅ.11ರ ಭಾನುವಾರ ಕೆದಿಲ ಗ್ರಾ.ಪಂ.ಕಚೇರಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಜಿ.ಪಂ.ಸದಸ್ಯೆ ಮಂಜುಳಾ ಮಾದವ ಮಾವೆ ಅವರು, ಹೆಣ್ಣು ಮಕ್ಕಳನ್ನು ಪೂಜನೀಯ ಭಾವದಿಂದ ನೋಡಿಕೊಂಡಾಗ ಖಂಡಿತ ಅಂತಹ ಗ್ರಾಮ ಜಿಲ್ಲೆ, ರಾಜ್ಯ ದೇಶ ಸಂಪತ್ಬರಿತವಾಗುತ್ತದೆ. ಜೊತೆಗೆ ಈ ದೇಶದ ಭವ್ಯವಾದ ಸಂಸ್ಕ್ರತಿಯನ್ನು ಭದ್ರವಾಗಿ ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ. ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಶಿಕ್ಷಿತರನ್ನಾಗಿ ಮಾಡುವ ಜವಾಬ್ಧಾರಿ ಈ ಸಮಾಜದ ಪ್ರತಿಯೊಬ್ಬರಲ್ಲಿ ಇದೆ ಎಂದು ಹೇಳಿದರು.
ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಕ್ರೀಡೆ ರಾಜಕೀಯ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಭಾಗವಹಿಸುವಿಕೆಯನ್ನು ಬೆಂಬಲಿಸುವ ಮನಸ್ಸು ಮಾಡಿದರೆ ಸಾಮಾಜಿಕ ಬದಲಾವಣೆಗೆ ನಾಂದಿಯಾಗುತ್ತದೆ. ಸಾಮಾಜಿಕ ಜೀವನದಲ್ಲಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಯಶಸ್ಸಿನತ್ತ ನಡೆಯಬೇಕು. ಪ್ರತಿಭೆಗಳಿಗೆ ಅವಕಾಶ ಸಿಕ್ಕಾಗ ಹೆಣ್ಣು ಮಕ್ಕಳ ಕ್ರಿಯಾಶೀಲತೆಯ ಅನಾವರಣಗೊಳ್ಳಲು ಸಹಾಯಾವಾಗುತ್ತದೆ. ಪ್ರತಿಯೊಬ್ಬ ತಂದೆ ತಾಯಿ ಮಕ್ಕಳಿಗೆ ಶಿಕ್ಷಣವೆಂಬ ಆಸ್ತಿಯನ್ನು ನೀಡಿದಾಗ ದೇಶದಲ್ಲಿ ಆರ್ಥಿಕ ಸಬಲತೆ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಗ್ರಾ.ಪಂ.ಅಧ್ಯಕ್ಷ ಅಣ್ಣಪ್ಪ ಕುಲಾಲ್ ಅವರು, ಹೆಣ್ಣು ಮಕ್ಕಳ ರಕ್ಷಣೆಗೆ ಪೂರಕವಾದ ಅಂಶಗಳನ್ನೊಳಗೊಂಡ ಕಾನೂನುಗಳನ್ನು ಸರಕಾರ ಜಾರಿ ಮಾಡಿದ್ದು, ಇದರ ಮಾಹಿತಿಯನ್ನು ಪ್ರತಿಯೊಬ್ಬರೂ ಪಡೆದುಕೊಂಡು ಭಯಮುಕ್ತ ಸಮಾಜ ನಿರ್ಮಿಸಿ ಎಂದು ತಿಳಿಸಿದರು.
ಉಪನಿರ್ದೇಶಕಿ ಶ್ಯಾಮಲಾ ಮಾತನಾಡಿ, ಹೆಣ್ಣು ಮಕ್ಕಳಿಲ್ಲದೆ ಮನೆಗೆ ಸ್ಫೂರ್ತಿಯಿಲ್ಲ. ಹಾಗಾಗಿ ನಾವೆಲ್ಲರೂ ಹೆಣ್ಣು ಮಕ್ಕಳ ರಕ್ಷಣೆಗೆ, ಪೋಷಣೆಗೆ ಧ್ವನಿಯಾಗಬೇಕು. ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ವಿಟ್ಲ ಇದರ ಅಧ್ಯಕ್ಷೆ ಜೆಸಿಂತಾ, ಸಂಪನ್ಮೂಲ ವ್ಯಕ್ತಿ ಬಾಲನ್ಯಾಯಮಂಡಳಿ ಸದಸ್ಯ ಉಮೇಶ್ ನಿರ್ಮಲ್, ಗ್ರಾ.ಪಂ.ಸದಸ್ಯರಾದ ಉಮೇಶ್, ಬೇಬಿ, ಕುಶಲ, ಸುದರ್ಶನ, ವಿಟ್ಲ ಸಿ.ಡಿ.ಪಿ.ಒ ಸುಧಾಜೋಶಿ, ಗ್ರಾ.ಪಂ.ಪಿ.ಡಿ.ಒ ಹೊನ್ನಪ್ಪ ಗೌಡ, ವಿಟ್ಲ ಎಸಿಡಿಪಿಒ ಉಷಾ ಡಿ. ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕಿಯರು ಆರೋಗ್ಯ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪೆರಮೊಗರು ಜಂಕ್ಷನ್ನಲ್ಲಿ ಜಾಗೃತಿಯ ಜಾಥದ ಉದ್ಘಾಟನೆಯನ್ನು ಕೆದಿಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಲಯನ್ಸ್ ಅಧ್ಯಕ್ಷ ಅವರ ಕೈಗೆ ಕಾರ್ಯಕ್ರಮದ ಬ್ಯಾನರ್ ನೀಡುವ ಮೂಲಕ ನಡೆಸಲಾಯಿತು. ಬಳಿಕ ಜಾಥ ಪೆರಮೊಗರುವಿನಿಂದ ರಸ್ತೆ ಮೂಲಕ ಕೆದಿಲ ಭಜನಾ ಮಂದಿರದವರೆಗೆ ಹೋಗಿ ವಾಪಾಸ್ಸು ಪಂಚಾಯತ್ ಅವರಣದಲ್ಲಿವರೆಗೆ ಬಂದು ಸಮಾಪನಗೊಂಡಿತು. ನಂತರ, ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಹೆಣ್ಣು ಮಕ್ಕಳ ಶಿಶು ಪ್ರದರ್ಶನ ಹಾಗೂ ವಿದ್ಯಾರ್ಥಿನಿಯರಿಗೆ ರಸಪ್ರಶ್ನೆ ಏರ್ಪಡಿಸಿ ಬಹುಮಾನ ನೀಡಲಾಯಿತು.
ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸ್ಥಳೀಯ ವಿದ್ಯಾರ್ಥಿನಿಗಳಾದ ಹರ್ಷಿತಾ, ಸುದೀಕ್ಷಾ ಕೊಡಾಜೆ, ಆಶಿಕಾ, ಚೈತ್ರಾ ಎನ್ ಅವರಿಗೆ ಹಾಗೂ ಅಂತರಾಷ್ಟ್ರೀಯ ಚೆಸ್ ಆಟಗಾರ್ತಿ ವಿಕಲಾಂಗ ವಿದ್ಯಾರ್ಥಿನಿ ಕು.ಯಶಸ್ವಿನಿ ಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹೆಣ್ಷು ಮಕ್ಕಳ ರಕ್ಷಣೆ, ಶಿಕ್ಷಣ, ಹಾಗೂ ಪೋಷಣೆಯ ಬಗ್ಗೆ ಪ್ರತಿಜ್ಞೆ ಸ್ವೀಕಾರ ಹಾಗೂ ಕೊರೊನಾಕ್ಕೆ ಸಂಬಂಧಿಸಿದ ಕರ್ತವ್ಯಗಳನ್ನು ತಪ್ಪದೆ ಪಾಲಿಸುತ್ತೇನೆ ಎಂಬ ಪ್ರತಿಜ್ಞೆ ಸ್ವೀಕಾರ ನಡೆಯಿತು.
ವಿಟ್ಲ ಸಿ.ಡಿ.ಪಿ.ಒ.ಸುಧಾಜೋಶಿ ಸ್ವಾಗತಿಸಿ, ಮೇಲ್ವಿಚಾರಕಿ ರೂಪ ವಂದಿಸಿದರು. ಮೇಲ್ವಿಚಾರಕಿ ರೋಹಿಣಿ ಕಾರ್ಯಕ್ರಮ ನಿರೂಪಿಸಿದರು.