ಸುಳ್ಯ, ಅ. 11 (DaijiworldNews/MB) : ನಗರದ ಶಾಂತಿನಗರದಲ್ಲಿ ಗುರುವಾರ ನಡೆದ ಸಂಪಾಜೆ ನಿವಾಸಿ ಸಂಪತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಗುರುತು ಹಚ್ಚುವ ಕವಾಯತು ಬಾಕಿ ಇರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಆರೋಪಿಗಳ ಹೆಸರನ್ನು ಬಹಿರಂಗ ಪಡಿಸಿಲ್ಲ. ನಾಲ್ಬರು ಆರೋಪಿಗಳು ಸಂಪಾಜೆ ಕಲ್ಲುಗುಂಡೆಯವರು ಹಾಗೂ ಓರ್ವ ಆರೋಪಿ ಜಾಲ್ಸೂರು ಗ್ರಾಮದವರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಆರೋಪಿಗಳು ಸುಬ್ರಹ್ಮಣ್ಯ ಬಿಸ್ಲೆ ಘಾಟ್ ರಸ್ತೆಯಲ್ಲಿ ತಲೆಮರೆಸಿಕೊಳ್ಳಲು ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ವಶಕ್ಕೆ ಪಡೆಯಲಾಗಿದ್ದು ಈಗಾಗಲೇ ಅವರು ಕೃತ್ಯಕ್ಕೆ ಬಳಸಿರುವ ವಾಹನ ಸ್ವಾಧೀನಕ್ಕೆ ಪಡೆದುಕೊಳ್ಳಲಾಗಿದೆ. ಹಾಗೆಯೇ ಆರೋಪಿಗಳು ಈ ಹತ್ಯೆಗಾಗಿ ಮೂರು ಬಂದೂಕು, ಒಂದು ಕತ್ತಿ ಹಾಗೂ ಒಂದು ಚೂರಿಯನ್ನು ಬಳಸಿದ್ದಾರೆ ಎಂದು ತಿಳಿದು ಬಂದಿದೆ.
ಶಾಂತಿನಗರ ನಿವಾಸಿ ಸಂಪತ್ ಮನೆಯಿಂದ ಬೆಳಿಗ್ಗೆ ಸಮಯ ಸುಮಾರು 7.15ಗಂಟೆಗೆ ಹೊರಟು ಮನೆಯ ಪಕ್ಕದಲ್ಲಿದ್ದ ಕಾರಿನಲ್ಲಿ ಕುಳಿತಾಗ ಸುಮಾರು ನಾಲ್ಕು ಜನ ದುಷ್ಕರ್ಮಿಗಳ ತಂಡ ಸಂಪತ್ ಕುಳಿತಿದ್ದ ಕಾರಿನ ಗಾಜನ್ನು ಒಡೆದು ತಲವಾರು, ಚೂರಿ ಮತ್ತು ಕೋವಿಯಿಂದ ದಾಳಿ ನಡೆಸಿತ್ತು. ಈ ವೇಳೆ ಸಂಪತ್ ತಪ್ಪಿಸುವ ಪ್ರಯತ್ನದಲ್ಲಿ ಪಕ್ಕದಲ್ಲಿರುವ ಮನೆಯೊಂದಕ್ಕೆ ಓಡಿಹೋಗಿದ್ದು ಆತನನ್ನು ಬೆನ್ನಟ್ಟಿ ಬಂದ ದುಷ್ಕರ್ಮಿಗಳ ತಂಡ ಮನೆಯೊಳಗೆ ಪ್ರವೇಶಿಸಿ ಸಂಪತ್ ನನ್ನು ತಲವಾರು ಮತ್ತು ಚೂರಿಯಿಂದ ಕಡಿದು ಕೋವಿಯಿಂದ ಗುಂಡು ಹಾರಿಸಿದ್ದರು. ಈ ವೇಳೆ ತಡೆಯಲು ಬಂದ ಸ್ಥಳೀಯರಾದ ವ್ಯಕ್ತಿಯೊಬ್ಬರಿಗೂ ತಲವಾರಿನಿಂದ ಹಲ್ಲೆ ನಡೆಸಿದ್ದರು. ಈ ವೇಳೆ ಶಬ್ದ ಕೇಳಿ ಸ್ಥಳೀಯರು ಘಟನಾ ಸ್ಥಳಕ್ಕೆ ಬರುತ್ತಿರುವುದನ್ನು ಕಂಡ ದುಷ್ಕರ್ಮಿಗಳು ಪರಾರಿಯಾಗಿದ್ದರು.
ಕೊಲೆಯಾದ ಸಂಪತ್ ಕುಮಾರ್ ಮೂಲತ ಸಂಪಾಜೆ ನಿವಾಸಿಯಾಗಿದ್ದು ಕೊಡಗು ಜಿಲ್ಲೆಯ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿ ಅವರ ಹತ್ಯೆಯಲ್ಲಿ ಕೊಲೆ ಆರೋಪಿಯಾಗಿದ್ದು ಇತ್ತಿಚೆಗೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ. ಆರೋಪಿತರು ಕಳಗಿ ಬಾಲಚಂದ್ರರನ್ನು ಸಂಪತ್ ಕೊಲೆ ಮಾಡಿರುವ ದ್ವೇಷದಿಂದ ಈ ಕೃತ್ಯವನ್ನು ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಎರಡು ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಎರಡು ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿತ್ತು.
ಸಿಪಿಐ ಸುಳ್ಯ ನವೀನ್ ಚಂದ್ರ ಜೋಗಿಯವರ ನೇತೃತ್ವದಲ್ಲಿ ಪಿಎಸ್ಐ ಹರೀಶ್ ತಂಡ ಹಾಗೂ ಡಿಸಿಐಬಿ ತಂಡ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.