ಮೂಡುಬಿದಿರೆ, ಅ. 11 (DaijiworldNews/MB) : ಮೂಡುಬಿದಿರೆಯ ಶಿರ್ತಾಡಿ ಬಳಿಯ ಔದಾಲ್ ಎಂಬಲ್ಲಿ ಕಾರಿನಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸ್ ಫೈರಿಂಗ್ ನಡೆಸಿದ ಘಟನೆಯಲ್ಲಿ ಪೊಲೀಸರ ಬೆಂಬಲಕ್ಕೆ ನಿಂತ ಮುಲ್ಕಿ-ಮೂಡಬಿದ್ರಿ ಶಾಸಕ ಉಮಾನಾಥ ಕೋಟ್ಯಾನ್ ಅವರು ''ಗೋಕಳ್ಳರ ಮೇಲೆ ಫೈರಿಂಗ್ ಮಾಡಿದ ಪೊಲೀಸರ ಕಾರ್ಯ ಅಭಿನಂದನಾರ್ಹ'' ಎಂದು ಹೇಳಿದ್ದಾರೆ.

''ಪ್ರಸ್ತುತ ಗೋಕಳ್ಳರ ವಿರುದ್ಧ ನಿಜಕ್ಕೂ ಕಠಿಣ ಕ್ರಮದ ಅಗತ್ಯವಿದೆ. ಈ ಹಿಂದೆಯೂ ನಾವು ಈ ಕುರಿತಾಗಿ ಸರ್ಕಾರವನ್ನು ಒತ್ತಾಯಿಸಿದ್ದೆವು. ಈ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವ ಬಸವರಾಜು ಬೊಮ್ಮಾಯಿ ಅವರೊಂದಿಗೆ ನಾನು ಮಾತನಾಡಿಲಿದ್ದೇನೆ'' ಎಂದು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಮೂಡುಬಿದಿರೆಯ ಶಿರ್ತಾಡಿ ಬಳಿಯ ಔದಾಲ್ ಎಂಬಲ್ಲಿ ಆರೋಪಿಗಳು ಕಾರಿನಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿದ್ದ ಸಂದರ್ಭ ಪೊಲೀಸರು ಕಾರು ನಿಲ್ಲಿಸಲು ಸೂಚಿಸಿದ್ದು ಆರೋಪಿಗಳು ಪೊಲೀಸರ ಸೂಚನೆಯನ್ನು ತಿರಸ್ಕರಿಸಿ, ಪೊಲೀಸ್ ಜೀಪಿಗೆ ಡಿಕ್ಕಿಯಾಗಲು ಯತ್ನಿಸಿದ್ದರು. ಈ ವೇಳೆ ಕಾರನ್ನು ಬೆನ್ನಟ್ಟಿದ ಪೊಲೀಸ್ ಇನ್ಸ್ಪೆಕ್ಟರ್ ದಿನೇಶ್ ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಪೊಲೀಸ್ ಫೈರಿಂಗ್ ಕೇಳಿದ ಇಬ್ಬರು ಆರೋಪಿಗಳು ಕಾರು ಹಾಗೂ ದನಗಳನ್ನು ಬಿಟ್ಟು ಪರಾರಿಯಾಗಿದ್ದು ಬಳಿಕ ಪೊಲೀಸರು ಕಾರು ಹಾಗೂ ಅದರಲ್ಲಿದ್ದ ಆರು ದನಗಳನ್ನು ವಶಪಡಿಸಿಕೊಂಡಿದ್ದಾರೆ.