ಕಾಸರಗೋಡು, ಅ. 11 (DaijiworldNews/MB) : ಕೊರೊನಾ ಲಕ್ಷಣಗಳೊಂದಿಗೆ ಕ್ವಾರಂಟೈನ್ಗೆ ದಾಖಲಿಸಲಾಗಿದ್ದ ಶಿಕ್ಷಕರೋರ್ವರು ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದ್ದು, ಸೂಕ್ತ ಚಿಕಿತ್ಸೆ ಲಭಿಸದಿರುವುದೇ ಸಾವಿಗೆ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ.

ಕುಂಬಳೆ ಸೂರಂಬೈಲ್ ಜಿಎಚ್ಎಸ್ಎಸ್ ಶಾಲೆಯ ಶಿಕ್ಷಕ, ಸೀತಾಂಗೋಳಿ ಮುಖಾರಿಗದ್ದೆಯ ಪದ್ಮನಾಭ (48) ಮೃತಪಟ್ಟವರು.
ಕೊರೊನಾ ನಿಯಂತ್ರಣ ಯೋಜನೆಯ ಕರ್ತವ್ಯದಲ್ಲಿದ್ದ ಪದ್ಮನಾಭರವರಿಗೆ ದಿನಗಳ ಹಿಂದೆ ಕೊರೊನಾ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಕೊರೊನಾ ನಿಗಾ ಕೇಂದ್ರದಲ್ಲಿ ದಾಖಲಿಸಲಾಗಿತ್ತು. ಆದರೆ ಅನಾರೋಗ್ಯ ಕಂಡು ಬಂದಿದ್ದ ಇವರಿಗೆ ಸೂಕ್ತ ತಪಾಸಣೆ ಹಾಗೂ ಚಿಕಿತ್ಸೆ ಲಭಿಸಿಲ್ಲ ಎನ್ನಲಾಗಿದೆ.
ಸೂಕ್ತ ಚಿಕಿತ್ಸೆ ಲಭಿಸದ ಬಗ್ಗೆ ಪದ್ಮನಾಭರವರು ತಮ್ಮ ಸಹಚರರಿಗೂ ತಿಳಿಸಿದ್ದರು ಎನ್ನಲಾಗಿದೆ. ಆದಿತ್ಯವಾರ ಬೆಳಿಗ್ಗೆ ಮೃತಪಟ್ಟಿದ್ದು, ಚಿಕಿತ್ಸೆ ಲಭಿಸದೆ ಇದ್ದುದ್ದರಿಂದ ಪದ್ಮನಾಭರವರು ಮೃತಪಟ್ಟಿರುವುದಾಗಿ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ಹಾಗೂ ಲೋಪ ಉಂಟಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯ ಕೇಳಿಬರುತ್ತಿದೆ.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಪದ್ಮನಾಭರವರು ಎರಡು ವರ್ಷಗಳ ಹಿಂದೆ ಶಿಕ್ಷಕರಾಗಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು.