ಮಂಗಳೂರು ಮೇ 19: ವಿಶ್ವಾಸಮತ ಸಾಬೀತುಪಡಿಸುವ ಹಿನ್ನೆಲೆ ಮಂಗಳೂರಿನಲ್ಲಿ ರಾಜಕೀಯ ಘರ್ಷಣೆಯಾಗದಂತೆ ತಡೆಯುವ ಉದ್ದೇಶದಿಂದ ಕಮೀಷನರೇಟ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ಈ ಆದೇಶ ಹೊರಡಿಸಿದ್ದು, ಇಂದು ಮುಂಜಾನೆ 8 ಗಂಟೆಯಿಂದ ಮೇ 20 ಬೆಳಿಗ್ಗೆ 10 ಗಂಟೆಯವರೆಗೆ ಈ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ವಿಶ್ವಾಸಮತ ಸಾಬೀತುಪಡಿಸುವ ಹಿನ್ನಲೆ, ಈಗಾಗಲೇ ರಾಜ್ಯಾದ್ಯಂತ ಪರ ವಿರೋಧ ಚರ್ಚೆ ಅನಿಸಿಕೆಗಳು ವ್ಯಕ್ತವಾಗುತ್ತಿವೆ. ಈ ಕಾರಣ ಮಂಗಳೂರಿನಲ್ಲಿಯೂ ರಾಜಕೀಯ ಘರ್ಷಣೆ ನಡೆಯುವ ಆತಂಕ ವ್ಯಕ್ತವಾಗಿದೆ. ಈ ಹಿನ್ನಲೆ ನಗರದಲ್ಲಿ ಮುಂಜಾಗೃತ ಕ್ರಮವಾಗಿ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಯಾವುದೇ ರೀತಿಯ ವಿಜಯೋತ್ಸವ, ಪಟಾಕಿ ಸಿಡಿಸುವುದು, ಸಾರ್ವಜನಿಕ ಮೆರವಣಿಗೆ , ರಾಜಕೀಯ ಸಭೆ ಸಮಾರಂಭ ನಡೆಸುವುದನ್ನು ನಿಷೇಧಿಸಲಾಗಿದೆ. ಮಾತ್ರವಲ್ಲ, ನಿಷೇಧಾಜ್ಞೆ ನಿಯಮದ ಪ್ರಕಾರ ಸಾರ್ವಜನಿಕರು 5 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ರಸ್ತೆ, ಬೀದಿ, ಓಣಿ , ಕೆರಿಗಳಲ್ಲಿ , ಸಾರ್ವಜನಿಕ ಕಟ್ಟಡ ಮತ್ತು ಸರಕಾರಿ ಕಟ್ಟಡ ಕಚೇರಿ ಸುತ್ತಮುತ್ತ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.