ಕಾಸರಗೋಡು, ಅ. 12 (DaijiworldNews/PY): ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಕುಖ್ಯಾತ ಆರೋಪಿಗಳನ್ನು ಚೀಮೇನಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.





ಬಂಧಿತ ಆರೋಪಿಗಳನ್ನು ಕಾರಟ್ ನೌಶಾದ್ (40) ಹಾಗೂ ಸಂಶುದ್ದೀನ್ (42) ಎಂದು ಗುರುತಿಸಲಾಗಿದೆ .
ಇಂದು ಮಧ್ಯಾಹ್ನ ಚೀಮೇನಿ ಠಾಣಾ ವ್ಯಾಪ್ತಿಯ ಚೋನಡ್ಕ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಈ ದಾರಿಯಾಗಿ ಬಂದ ಕಾರನ್ನು ನಿಲ್ಲಿಸಲು ಸೂಚನೆ ನೀಡಿದ್ದು, ಆದರೆ. ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾರೆ. ಇದರಿಂದ ಸಂಶಯಗೊಂಡ ಪೊಲೀಸರು ಕೂಡಲೇ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಪೊಲೀಸರು ಎಲ್ಲಾ ಕಡೆ ವಾಹನ ತಪಾಸಣೆ ನಡೆಸಿದ್ದು, ನೀಲೇಶ್ವರ ಪಳ್ಳಿಕೆರೆಯಲ್ಲಿ ಪೊಲೀಸರು ಆ ಕಾರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ನೌಶಾದ್ ಎಂಬಾತ ಕಾರಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಪೊಲೀಸರು ಆತನನ್ನು ಬೆನ್ನಟ್ಟಿದ್ದು, ಸ್ಥಳೀಯರ ಸಹಾಯದಿಂದ ಪೊಲೀಸರು ಆತನನ್ನು ವಶಪಡಿಸಿಕೊಂಡಿದ್ದಾರೆ.
ಕಾರನ್ನು ತಪಾಸಣೆ ನಡೆಸಿದಾಗ ಹತ್ತು ಕಿಲೋ ಗಾಂಜಾ ಪತ್ತೆಯಾಗಿದ್ದು, ಪೊಲೀಸರು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಆಂಧ್ರ ಪ್ರದೇಶದಿಂದ ಕಾಸರಗೋಡು ಕಡೆಗೆ ಕಾರಿನಲ್ಲಿ ಬಚ್ಚಿಟ್ಟು ಗಾಂಜಾವನ್ನು ಸಾಗಾಟ ಮಾಡುತ್ತಿದ್ದರು. ಹೆಚ್ಚಿನ ತನಿಖೆ ನಡೆಯುತ್ತಿದೆ.