ಉಳ್ಳಾಲ, ಅ. 12 (DaijiworldNews/SM): ಕಾರೊಂದರಲ್ಲಿ ನಕಲಿ ನೋಟುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಉಳ್ಳಾಲ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳು ಉಳ್ಳಾಲ ಬೀಚ್ ಬಳಿ ನಕಲಿ ನೋಟುಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದರು ಎಂದು ಸಂಶಯಗೊಂಡು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಬಂಧಿತರನ್ನು ಸೈಯದ್ ಹಕೀಬ್, ಫೈಸಲ್ ಖಾನ್, ಮೊಹಮ್ಮದ್ ಜಮಾನ್, ಹಾರಿಸ್ ಎಂದು ಗುರುತಿಸಲಾಗಿದ್ದು ಸಲೀಂ ಹಾಗೂ ರಂಜಿತ್ ಪರಾರಿಯಾಗಿದ್ದಾರೆ.
ಉಳ್ಳಾಲ ಬೀಚ್ ನಲ್ಲಿ ಬೆಂಗಳೂರು ನೋಂದಣಿ ಇರುವ ಹೋಂಡಾ ಸಿಟಿ ಕಾರೊಂದರಲ್ಲಿ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ಯುವಕರ ತಂಡವನ್ನು ಕಂಡ ಉಳ್ಳಾಲ ಪೊಲೀಸರು ಕಾರಿನತ್ತ ಹೋಗುತ್ತಿದ್ದಂತೆಯೇ ಇಬ್ಬರು ಓಡಿ ಹೋಗಿದ್ದಾರೆ. ತಕ್ಷಣ ಜಾಗೃತಗೊಂಡ ಪೊಲೀಸರು ಕಾರಿನ ಒಳ ನುಗ್ಗಿ ಪರಿಶೀಲಿಸಿ, ಯುವಕರನ್ನು ವಶಕ್ಕೆ ತೆಗೆದುಕೊಂಡು ಪಕ್ಕದಲ್ಲೇ ಇರುವ ಠಾಣೆಗೆ ಕೊಂಡೊಯ್ದು ತನಿಖೆ ನಡೆಸಿದಾಗ ಆರೋಪಿಗಳು ಕಮಿಷನ್ ಆಸೆಗಾಗಿ ನಕಲಿ ನೋಟುಗಳನ್ನು ಮಾರಾಟ ಮಾಡಲು ಬಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಆರೋಪಿಗಳಿಂದ ಕಾರು, 5 ಮೊಬೈಲ್ ಫೋನ್ ಗಳು ಹಾಗೂ ಮಾರಾಟಕ್ಕೆ ತಂದಿದ್ದ 2.40ಲಕ್ಷ ರೂಪಾಯಿ ನಕಲಿ ನೋಟುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.