ಬೆಂಗಳೂರು, ಮೇ 19: ಚುನಾವಣೆ ನಡೆದ ನಂತರ ನಾಪತ್ತೆಯಾಗಿದ್ದ ವಿಜಯನಗರ ಶಾಸಕ ಆನಂದ್ ಸಿಂಗ್ ಹಾಗೂ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಇನ್ನೂ ಕಲಾಪಕ್ಕೆ ಹಾಜರಾಗಿಲ್ಲ.
ಡಿಕೆಶಿ ನೇತ್ರತ್ವದ ತಂಡ ತಮ್ಮ ಶಾಸಕರನ್ನು ಕಾಪಾಡಿಕೊಂಡು ಇದೀಗ ವಿಧಾನಸೌಧದೊಳಗೆ ಬಂದಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ಒಟ್ಟು 78 ಶಾಸಕರಿದ್ದಾರೆ. ಈ ಪೈಕಿ ಇದೀಗ ಕಲಾಪಕ್ಕೆ ಹಾಜರಿರುವ ವೇಳೆ ಕೇವಲ 76 ಶಾಸಕರಿದ್ದು, ಇಬ್ಬರು ಶಾಸಕರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬಹುಮತ ಸಾಧಿಸಲು 110 ಸ್ಥಾನಗಳು ಬಿಜೆಪಿಗೆ ಬೇಕಾಗಿದ್ದು, ಈಗಾಗಲೇ 104 ಸ್ಥಾನಗಳನ್ನು ಬಿಜೆಪಿ ಪಡೆದಿದೆ. ಇನ್ನು ಕೇವಲ 6 ಶಾಸಕರ ಬೆಂಬಲದ ಅವಶ್ಯಕತೆ ಇದೆ. ಆದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಶಾಸಕರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಬೆಂಬಲ ನೀಡದಂತೆ ಆದೇಶಿಸಿದ್ದು, ಭಾರೀ ಕುತೂಹಲ ಕೆರಳಿಸಿದೆ.
ಇತ್ತ ಇದೀಗ ಎಲ್ಲಾ ಶಾಸಕರು ಕಲಾಪಕ್ಕೆ ಹಾಜರಿರಬೇಕೆಂದು ಆದೇಶಿಸಿದ್ದರೂ ಕಾಂಗ್ರೆಸ್ ಪಕ್ಷದ ಪ್ರತಾಪ್ ಗೌಡ ಮತ್ತು ಆನಂದ್ ಸಿಂಗ್ ಅವರು ಗೈರಾಗಿದ್ದಾರೆ. ಸದ್ಯ ಕಾಂಗ್ರೆಸ್ 78 ಶಾಸಕರ ಪೈಕಿ 76 ಹಾಗೂ ಬಿಜೆಪಿಯ 104, ಜೆಡಿಎಸ್ ನ 37 ಹಾಗೂ 2 ಪಕ್ಷೇತರ ಶಾಸಕರು ಕಲಾಪದಲ್ಲಿದ್ದಾರೆ.
ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ತಮ್ಮ ಹಿಡಿತದಲ್ಲಿ ಇರುವ ಶಾಸಕರನ್ನು ವಿಧಾನಸೌಧಕ್ಕೆ ಕರೆದುಕೊಂಡು ಬಂದಿದ್ದು, ಕಲಾಪ ಆರಂಭವಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.