ಮಂಗಳೂರು, ಅ. 12 (DaijiworldNews/SM): ಕರಾವಳಿ ಭಾಗದ ಜನರ ಧಾರ್ಮಿಕ ನಂಬಿಕೆಯಲ್ಲೊಂದಾಗಿರುವ ನವರಾತ್ರಿ ಸಂದರ್ಭದ ಹುಲಿವೇಷ ಕುಣಿತಕ್ಕೆ ಸಂಪ್ರದಾಯ ಪ್ರಕಾರ ಜಿಲ್ಲಾಡಳಿತ ಅವಕಾಶ ಕಲ್ಪಿಸುವ ಭರವಸೆ ಇದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ದಸರಾ ಅಚರಣೆಯ ವೇಳೆ ದೇವಸ್ಥಾನದ ಸಂಪ್ರದಾಯಕ್ಕೆ ಯಾವುದೇ ಧಕ್ಕೆ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ, ಸಂಪ್ರದಾಯ ಪ್ರಕಾರ ಹುಲಿ ವೇಷ ಕುಣಿತಕ್ಕೆ ಈ ಬಾರಿ ಅವಕಾಶ ನೀಡಲು ದ.ಕ ಜಿಲ್ಲಾಡಳಿತ ನಿರ್ಧರಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಕೊರೊನಾ ಕಾರಣದಿಂದಾಗಿ ದಸರಾ ಸಂದರ್ಭದ ಕರಾವಳಿಯಲ್ಲಿ ಪ್ರಸಿದ್ಧವಾಗಿರುವ ಹಾಗೂ ಧಾರ್ಮಿಕ ಭಾವನೆಗಳನ್ನೊಳಗೊಂಡಿರುವ ಹುಲಿ ವೇಷ ಕುಣಿತಕ್ಕೆ ದ.ಕ. ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಆದರೆ, ವಿವಿಧ ದೇವಸ್ಥಾನ ಹಾಗೂ ಶಾರದೋತ್ಸವ ಸಮಿತಿಯ ಪ್ರಮುಖರು ಅವಕಾಶ ನೀಡುವಂತೆ ತನಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ ಎಂದರು.
ಈ ನಡುವೆ, ಭಕ್ತರ ಧಾರ್ಮಿಕ ಆಚರಣೆಗೆ ಸಂಪ್ರದಾಯ ಬದ್ಧವಾಗಿ ಹರಕೆಯ ವೇಷ ಕುಣಿತಕ್ಕೆ ಅವಕಾಶ ಕಲ್ಪಿಸಬೇಕೆಂದು ದೈಜಿವರ್ಲ್ಡ್ ಅಭಿಯಾನ ಆರಂಭಿಸಿ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಸೇರಿದಂತೆ ಹಲವರಿಗೆ ಮನವಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ಜಿಲ್ಲಾಡಳಿತ, ಅಧಿಕಾರಿಗಳು ಹಾಗೂ ಸಚಿವರು ನೀಡಿದ್ದರು. ಇದರ ಬೆನ್ನಲ್ಲೇ ಶಾಸಕ ವೇದವ್ಯಾಸ್ ಕಾಮತ್ ಕೂಡ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ.
ಕರಾವಳಿಯ ಮಣ್ಣಿನ ಸಂಸ್ಕೃತಿ ಸಂಸ್ಕಾರ ಹಾಗೂ ಸಂಪ್ರದಾಯಕ್ಕೆ ಯಾವುದೇ ಧಕ್ಕೆ ಎದುರಾಗಬಾರದು ಎಂಬ ಕಾರಣದಿಂದ ನಾನು ಈಗಾಗಲೇ ಜಿಲ್ಲಾಧಿಕಾರಿಯವರಲ್ಲಿ ಈ ವಿಷಯ ಪ್ರಸ್ತಾವಿಸಿದ್ದೇನೆ. ಸಂಪ್ರದಾಯ ಪ್ರಕಾರವಾಗಿ ಹುಲಿ ವೇಷ ಕುಣಿತಕ್ಕೆ ಅವಕಾಶ ನೀಡುವಂತೆ ಕೋರಲಾಗಿದೆ. ಹೀಗಾಗಿ ಸಂಪ್ರದಾಯದಂತೆ ಹುಲಿವೇಷ ಕುಣಿತಕ್ಕೆ ಜಿಲ್ಲಾಡಳಿತ ಅವಕಾಶ ನೀಡಲಿದ್ದು, ಯಾರೂ ಕೂಡ ಆತಂಕ ಪಡುವ ಆವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.