ಉಡುಪಿ, ಅ. 12 (DaijiworldNews/SM): ತಾನು ಕಲಿತ ಪ್ರೌಢಶಾಲೆಯನ್ನು ಮುಚ್ಚಬಾರದು ಎಂದು ಬಾಲಕಿಯೊಬ್ಬಳು ಬರೆದ ಪತ್ರಕ್ಕೆ ಪ್ರಧಾನಿ ಕಾರ್ಯಾಲಯ ಸ್ಪಂದಿಸಿದೆ. ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪದ ಪಂಚನಬೆಟ್ಟು ವಿದ್ಯಾವರ್ಧಕ ಅನುದಾನಿತ ಪ್ರೌಢ ಶಾಲೆಯ ವಿದ್ಯಾರ್ಥಿನಿಯಾಗಿದ್ದ ವರ್ಷಿತ ಆರ್ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದ ವಿದ್ಯಾರ್ಥಿನಿಯಾಗಿದ್ದಾಳೆ.

ಪಂಚನಬೆಟ್ಟು ವಿದ್ಯಾವರ್ಧಕ ಅನುದಾನಿತ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಮತ್ತೊಂದು ಶಾಲೆಯೊಂದಿಗೆ ಈ ಶಾಲೆಯನ್ನು ವಿಲೀನಗೊಳಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿತ್ತು. ಆ ಕಾರಣದಿಂದಾಗಿ ಶಾಲೆಯ ಶಿಕ್ಷಕರನ್ನು ಬೇರೆ ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಿ ಆದೇಶ ನೀಡಲಾಗಿತ್ತು. ಈ ನಡುವೆ ಗ್ರಾಮಸ್ಥರು ಈ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ನಡುವೆ ಶಿಕ್ಷಣಾ ಇಲಾಖೆ ತಾತ್ಕಾಳಿಕ ಅನುಮತಿ ಮುಂದುವರೆಸಿತ್ತು.
ಹೀಗಿರುವ ಸಂದರ್ಭದಲ್ಲೇ ಶಾಲೆಯ ವಿದ್ಯಾರ್ಥಿನಿ ವರ್ಷಿತ ಆರ್ ಪ್ರಧಾನಿ ಕಾರ್ಯಾಲಯಕ್ಕೆ ಪತ್ರವೊಂದನ್ನು ಬರೆದಿದ್ದಳು. ಪಂಚನಬೆಟ್ಟು ಶಾಲೆಯನ್ನು ಉಳಿಸಿ ಕೊಡಬೇಕೆಂದು ಮನವಿ ಮಾಡಿದ್ದಳು. ಈ ಪರಿಸರದ ಸುಮಾರು ಹದಿನೈದು ಕಿಲೋಮೀಟರ್ ವ್ಯಾಪ್ತಿಯ ಮಕ್ಕಳಿಗೆ ಈ ಶಾಲೆಯಿಂದ ಅನುಕೂಲವಾಗುತ್ತದೆ. ಶಾಲೆ ಮುಚ್ಚಿದರೆ ಎಂಟು ಕಿಲೋಮೀಟರ್ ದೂರದ ಬೈಲೂರಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಗ್ರಾಮಾಂತರ ಪ್ರದೇಶದ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿ ಎಂದು ಕೋರಿಕೊಂಡಿದ್ದಳು. ವಿದ್ಯಾರ್ಥಿನಿ ಬರೆದ ಪತ್ರ ಸ್ವೀಕರಿಸಿರುವ ಕಾರ್ಯಾಲಯ, ಆಕೆಯ ಮನವಿಗೆ ಸ್ಪಂದಿಸಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.
ಶಾಲೆ ಉಳಿಸಿಕೊಳ್ಳುವ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಉತ್ತರಿಸುವಂತೆ ಸೂಚನೆ ನೀಡಿದೆ.