ಮಂಗಳೂರು, ಅ. 13 (DaijiworldNews/MB) : ನಗರದ ದ್ವಿತೀಯ ಪಿಯುಸಿಯ ವಿದ್ಯಾರ್ಥಿ ಕೃಷಿಕರಿಗೆ ತಮ್ಮ ಭೂಮಿಯಲ್ಲಿ ತಾವು ಇಚ್ಛಿಸುವ ಬೆಳೆಯನ್ನು ಬೆಳೆಯಲು ಸೂಕ್ತವೇ ಎನ್ನವಂತಹ ಮಣ್ಣಿನ ಸಾರಸತ್ವವನ್ನು ಅರಿಯಲು ಸಾಧ್ಯವಾಗುವಂತಹ ಅಗ್ರಿಬೋಟ್ ಸಾಧನ ಅಭಿವೃದ್ಧಿಪಡಿಸಿದ್ದಾರೆ.






ನಗರದ ಎಕ್ಸ್ಪರ್ಟ್ ಕಾಲೇಜಿನ ದ್ವಿತೀಯ ಪಿಯುಸಿಯ ವಿದ್ಯಾರ್ಥಿ ಸಾರ್ಥಕ್ ಎಸ್ ಕುಮಾರ್ ಎಂಬವರು ಅಗ್ರಿಬೋಟ್ ಎಂಬಂಥಹ ಮೂಲ ಮಾದರಿ ಸಾಧನವನ್ನು ಅಭಿವೃದ್ದಿ ಪಡಿಸಿದ್ದಾರೆ. ಇನ್ನು ಈ ಬಗ್ಗೆ ಮಾಹಿತಿ ನೀಡುವ ಆಪ್ ಒಂದನ್ನು ಕೂಡಾ ಸ್ವತಃ ಅವರೇ ಅಭಿವೃದ್ದಿ ಪಡಿಸಿದ್ದಾರೆ.
ಈ ಹಿಂದೆ ರೈತರು ತಮ್ಮ ಭೂಮಿಯ ಮಣ್ಣಿನ ಮಾದರಿಯನ್ನು ಲ್ಯಾಬ್ಗೆ ಕಳುಹಿಸಿ ಅದರ ವರದಿ ಲಭಿಸುವವರೆಗೂ ಕಾದು ಬಳಿಕ ಕೃಷಿ ಮಾಡಬೇಕಾಗಿತ್ತು. ಆದರೆ ಈ ಮೂಲ ಮಾದರಿ ಸಾಧನದಿಂದಾಗಿ ರೈತರು ತಾವಿರುವಲ್ಲಿಯೇ ತಮ್ಮ ಭೂಮಿಯ ಮಣ್ಣಿನ ಸಾರಸತ್ವವನ್ನು ಕೂಡಲೇ ಅರಿಯಬಹುದಾಗಿದೆ.
ಇನ್ನು ವಿದ್ಯಾರ್ಥಿ ಸಾರ್ಥಕ್ ಎಸ್ ಕುಮಾರ್ ಅವರೇ ಅಭಿವೃದ್ದಿಪಡಿಸಿರುವ ಆಪ್ನಲ್ಲಿ ಈ ಅಗ್ರಿಬೋಟ್ ಸಾಧನದ ಕಾರ್ಯದ ಬಗ್ಗೆ ಮಾಹಿತಿ ನೀಡಲಾಗಿದೆ. ಹಾಗೆಯೇ ರೈತ ತನ್ನ ಭೂಮಿಯ ಸಾರಸತ್ವಕ್ಕನುಗುಣವಾಗಿ ಯಾವ ರೀತಿ ಕೃಷಿ ಮಾಡಬೇಕು ಎಂಬುದನ್ನು ಈ ಆಪ್ ಸೂಚಿಸುತ್ತದೆ.
ಸಾರ್ಥಕ್ ಅವರು ಎನ್ಐಟಿಕೆಯಲ್ಲಿ ವಿಜ್ಞಾನ ತಂತ್ರಜ್ಞಾನ ಸ್ಪರ್ಧೆಗೆಂದು ಸುಮಾರು 15 ದಿನಗಳ ಕಾಲದಲ್ಲಿ ಅಭಿವೃದ್ದಿ ಪಡಿಸಿರುವ ಈ ಸಾಧನ ಬೃಹತ್ ವ್ಯವಸ್ಥೆಯ ಸಣ್ಣ ಮಾದರಿಯಾಗಿದ್ದು ಸ್ವಯಂ ಚಾಲಿತ ಕೃಷಿ ವ್ಯವಸ್ಥೆ ಎಂದು ಹೇಳಬಹುದು. ಈ ಮೂಲ ಮಾದರಿ ಸಾಧನದ ಈಗೀನ ದರ ಕೇವಲ ಎರಡು ಸಾವಿರ ರೂಪಾಯಿ ಆಗಿದೆ.
ಇನ್ನು ಈ ಬಗ್ಗೆ ದಾಯ್ಜಿವಲ್ಡ್ಗೆ ಮಾಹಿತಿ ನೀಡಿರುವ ವಿದ್ಯಾರ್ಥಿ ಸಾರ್ಥಕ್ ಅವರು, ಇದೊಂದು ಮೂಲ ಮಾದರಿ. ಹೊಲದ ಮಣ್ಣಿನ ಸಾರಸತ್ವವನ್ನು ತಿಳಿಯಬೇಕಾದರೆ ರೈತರು ಮಣ್ಣಿನ ಮಾದರಿಯನ್ನು ಕೃಷಿ ಇಲಾಖೆಗೆ ಕಳುಹಿಸಬೇಕಾಗುತ್ತದೆ. ಇದರ ವರದಿ ಲಭಿಸುವಾಗ ತಡವಾದ್ದಲ್ಲಿ ಕೃಷಿ ಮಾಡಲು ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಆ ಸಮಸ್ಯೆ ನಿವಾರಣೆಗಾಗಿ ಈ ಸಾಧನ ತಯಾರಿಸಲಾಗಿದೆ. 2019 ರಲ್ಲಿ ಎನ್ಐಟಿಕೆಯಲ್ಲಿ ನಡೆದ ಸ್ಪರ್ಧೆಗೆಂದು ಈ ಸಾಧನವನ್ನು ನಾನು ಹಾಗೂ ನನ್ನ ಸ್ನೇಹಿತ ನಿಖಿಲ್ ಗಿರೀಶ್ ಜೊತೆಯಾಗಿ ಸೇರಿ ಇದನ್ನು ತಯಾರಿಸಿದೆವು ಎಂದು ಹೇಳಿದರು.
ಇದು ಮೊದಲ ಮಾದರಿಯಾಗಿದ್ದು ಇದನ್ನು ನಾನು ಇನ್ನಷ್ಟು ಅಭಿವೃದ್ದಿಪಡಿಸಿ ರೈತರಿಗೆ ತಲುಪಿಸಲಾಗುತ್ತದೆ. ಇದನ್ನು ಉಪಯೋಗಿಸಿದ ಜನರಿಗೆ ದೊರೆಯುವ ಸಲಹೆಯಂತೆ ಇದನ್ನು ಅಭಿವೃದ್ದಿಪಡಿಸಿ ಒಂದು ಅಂತಿಮ ಸಾಧನವನ್ನು ತಯಾರಿಸುವವರೆಗೂ ಸಾಧನ ಅಭಿವೃದ್ದಿ ಕಾರ್ಯ ನಡೆಸುವ ಗುರಿ ಹೊಂದಿದ್ದೇನೆ. ಈ ಅಭಿವೃದ್ದಿ ಕಾರ್ಯಕ್ಕಾಗಿ ಈವರೆಗೂ ದೊರೆತಿರುವ ಪ್ರೋತ್ಸಾಹ ಇನ್ನು ಮುಂದೆಯೂ ದೊರೆಯಬೇಕು. ಕೃಷಿ ಇಲಾಖೆಯಿಂದಲೂ ಸಹಾಯ ಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.